ಚೆನ್ನೈ: ತಮಿಳುನಾಡಿನ ಕಲಕುರಿಚಿ ಕ್ಷೇತ್ರದ ಎಐಎಡಿಎಂಕೆ ಶಾಸಕ ಪ್ರಭು(35), 19 ವರ್ಷದ ಯುವತಿಯನ್ನು ಮದುವೆಯಾಗಿದ್ದು ವಿವಾದಕ್ಕೆ ಕಾರಣವಾಗಿದೆ.
35 ವರ್ಷದ ಪ್ರಭು ಬಿಟೆಕ್ ಪದವೀಧರರಾಗಿದ್ದಾರೆ. ಅವರು 19 ವರ್ಷದ ಸೌಂದರ್ಯ ಎಂಬ ಪಿಯುಸಿ ವಿದ್ಯಾರ್ಥಿನಿಯೊಂದಿಗೆ ಅಕ್ಟೋಬರ್ 5ರಂದು ಸೋಮವಾರ ಮದುವೆಯಾಗಿದ್ದಾರೆ. ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿರುವ ಯುವತಿಯ ತಂದೆ ಸ್ವಾಮಿನಾಥನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.
ತಮ್ಮ ಮಗಳನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳಲಾಗಿದೆ. ಮಗಳನ್ನು ಪುಸಲಾಯಿಸಿ ಬಲೆಗೆ ಬೀಳಿಸಿಕೊಂಡು ಪ್ರಭು ಮದುವೆಯಾಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಆದರೆ, ಯುವತಿ ಕುಟುಂಬಕ್ಕೆ ಪರಿಚಯದವರೇ ಆಗಿದ್ದ ಶಾಸಕ ಪ್ರಭು ಹಾಗೂ ಸೌಂದರ್ಯ ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವೆ ವಯಸ್ಸಿನ ಅಂತರ, ಜಾತಿ ಕಾರಣಕ್ಕೆ ಯುವತಿ ಮನೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ಶಾಸಕನ ಮದುವೆ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.