ಬೆಂಗಳೂರು: ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸ ಸೇರಿದಂತೆ ಅವರಿಗೆ ಸೇರಿದ 15 ಸ್ಥಳಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.
ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ವಶಕ್ಕೆ ಪಡೆದ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ದಾಳಿ ಮುಗಿದ ನಂತರ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ ಎನ್ನಲಾಗಿದ್ದು ಇವತ್ತು ಬೆಳಗ್ಗೆ 11 ಗಂಟೆಗೆ ಡಿಕೆಶಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ 5 ವರ್ಷದ ಅವಧಿಯಲ್ಲಿ ಡಿಕೆಶಿ ಅವರ ಆದಾಯ 33.92 ಕೋಟಿ ರೂಪಾಯಿಯಿಂದ 128.60 ಕೋಟಿ ರೂಪಾಯಿಯಷ್ಟು ಏರಿಕೆ ಆಗಿದೆ. ಅವರು ಆದಾಯಕ್ಕೂ ಮೀರಿ ಶೇಕಡ 44 ರಷ್ಟು ಆಸ್ತಿಯನ್ನು ಹೊಂದಿದ್ದಾರೆ. ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.