ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹಾಗೂ ಚೀನಾ ಸೈನಿಕರ ನಡುವೆ ನಡೆದ ಘರ್ಷಣೆ ಬಳಿಕ ಭಾರತ ಹಾಗೂ ಚೀನಾ ನಡುವೆ ಸಂಬಂಧ ಹಳಸಿದ್ದು, ಇದರ ಮಧ್ಯೆ ನವೆಂಬರ್ 17ರಂದು ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಜಿನ್ ಪಿಂಗ್ ಮುಖಾಮುಖಿಯಾಗಲಿದ್ದು, ಸಹಜವಾಗಿ ಮಹತ್ವ ಪಡೆದುಕೊಂಡಿದೆ.
ನವೆಂಬರ್ 17ರಂದು ಬ್ರಿಕ್ಸ್ ಶೃಂಗದ ವರ್ಚುವಲ್ ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಉಭಯ ನಾಯಕರು ಮುಖಾಮುಖಿಯಾಗಲಿರುವ ಕಾರಣ ಮಹತ್ವದ ಮಾತುಕತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಬ್ರಿಕ್ಸ್ ಶೃಂಗ ವರ್ಚುಯಲ್ ಸಭೆಯಲ್ಲಿ ಭಾರತ, ಚೀನಾ ಜೊತೆಗೆ ಇತರೆ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್ ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ಭಾಗವಹಿಸಲಿವೆ.
2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಚೀನಾ ಅಧ್ಯಕ್ಷ ಜಿನ್ ಪಿಂಗ್ ಜೊತೆ ಈವರೆಗೆ ಒಟ್ಟು 18 ಬಾರಿ ಭೇಟಿಯಾಗಿದ್ದು, 2019 ರಲ್ಲಿ ಜಿನ್ ಪಿಂಗ್ ತಮಿಳುನಾಡಿನ ಮಹಾಬಲಿಪುರಂಗೆ ಬಂದ ವೇಳೆ ಉಭಯ ನಾಯಕರ ನಡುವೆ ಮಾತುಕತೆ ನಡೆದಿತ್ತು. ಇದೀಗ ಮತ್ತೊಮ್ಮೆ ಮುಖಾಮುಖಿಯಾಗಲಿರುವ ನಾಯಕರು ಮಹತ್ವದ ಚರ್ಚೆ ನಡೆಸುವ ನಿರೀಕ್ಷೆಯಿದೆ.