ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ, ಎಫ್ಐಆರ್ ದಾಖಲಿಸಿದೆ.
ಕಳೆದ 5 ವರ್ಷದ ಅವಧಿಯಲ್ಲಿ ಡಿಕೆಶಿ ಅವರ ಆದಾಯ 33.92 ಕೋಟಿ ರೂಪಾಯಿಯಿಂದ 128.60 ಕೋಟಿ ರೂಪಾಯಿಯಷ್ಟು ಏರಿಕೆ ಆಗಿದೆ. ಅವರು ಆದಾಯಕ್ಕೂ ಮೀರಿ ಶೇಕಡ 44 ರಷ್ಟು ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದ್ದು ಆದಾಯಕ್ಕೂ ಮೀರಿ ಆಸ್ತಿಗಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.
ಅಕ್ರಮ ಆಸ್ತಿಗಳಿಕೆ ಕುರಿತಾಗಿ ಡಿ.ಕೆ. ಶಿವಕುಮಾರ್ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಹಿಂದೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ಭ್ರಷ್ಟಾಚಾರ ಪ್ರಕರಣ ಉಲ್ಲಂಘನೆಯಾದ ಬಗ್ಗೆ ಮಾಹಿತಿ ಬಂದಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿತ್ತು. ಡಿ.ಕೆ. ಶಿವಕುಮಾರ್ ಆದಾಯ ಏರಿಕೆಯಾಗಿದ್ದು 74.93 ಕೋಟಿ ರೂಪಾಯಿಯಷ್ಟು ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ.