ಬೆಂಗಳೂರು: ಸಿಬಿಐ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಮನೆಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಜೆ ಹೊರ ಬಂದು ಮನೆ ಬಳಿ ನೆರೆದಿದ್ದ ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಅಡ್ವೋಕೇಟ್ ಜನರಲ್ ಬೇಡವೆಂದರೂ ರಾಜ್ಯದ ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣಿದು ಸಿಬಿಐ ತನಿಖೆಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ವ್ಯವಸ್ಥೆಗೆ ತಲೆ ಭಾಗುತ್ತೇನೆ. ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ಸಹಕಾರ ನೀಡಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಮನೆಯಲ್ಲಿ ದಾಳಿಯ ವೇಳೆ 50 ಲಕ್ಷ ಕ್ಯಾಶ್, ಕೆಜಿಗಟ್ಟಲೆ ಚಿನ್ನ ಸಿಗ್ತು ಎಂದೆಲ್ಲಾ ಹೇಳಲಾಗ್ತಿದೆ. ನಾನು ಆರಾಮಾಗಿ ಟಿವಿ ನೋಡ್ತಾ ಕುಳಿತಿದ್ದೆ. ಚುನಾವಣೆ ಸಂದರ್ಭದಲ್ಲಿ ಇಂತಹುದೆಲ್ಲಾ ಸಾಮಾನ್ಯ. ನಾನು ಇದಕ್ಕೆಲ್ಲ ಹೆದರಲ್ಲ ಎಂದು ಹೇಳಿದ್ದಾರೆ.
ರಾಜಕಾರಣ, ಇಂತಹ ಕುತಂತ್ರಕ್ಕೆ ಹೆದರುವ ಮಗ ನಾನಲ್ಲ. ನಾನುಂಟು, ನೀವುಂಟು, ಭಕ್ತರು ಉಂಟು, ಭಗವಂತ ಉಂಟು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ರಾಜಕೀಯವಾಗಿ ಈ ರೀತಿ ತೊಂದರೆ ಕೊಡುತ್ತಾರೆ. ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಉಪಚುನಾವಣೆಯಲ್ಲಿ ನೀವೆಲ್ಲರೂ ಉತ್ತರ ಕೊಡಬೇಕು. ಇದು ಆರ್ಥಿಕ ವಿಚಾರ. ಸಿಬಿಐಗೆ ವಹಿಸುವ ಕೇಸಲ್ಲ, ಆರ್ಥಿಕ ಅಪರಾಧ ಪ್ರಕರಣ ಎಂದು ಅಡ್ವೊಕೇಟ್ ಜನರಲ್ ಹೇಳಿದರೂ ಮುಖ್ಯಮಂತ್ರಿಯವರು ಕೇಳದೆ ಸಿಬಿಐ ತನಿಖೆಗೆ ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
30 ವರ್ಷಗಳ ರಾಜಕಾರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನಿಮ್ಮೆಲ್ಲರ ಕಾರ್ಯಕರ್ತ, ಶಾಸಕ, ಸಚಿವ, ಅಧ್ಯಕ್ಷನಾಗಿ ತಪ್ಪು ಮಾಡಿಲ್ಲ. ನಾನು ತಪ್ಪು ಮಾಡಿದರೆ ಮಾತ್ರ ಹೆದರಿಕೊಳ್ಳಬೇಕು. ಸರ್ಕಾರ ಹೇಳಿದಂತೆ ಅಧಿಕಾರಿಗಳು ಕೇಳಬೇಕಾಗುತ್ತದೆ. ಸಿಬಿಐನವರಿಗೆ ವೃತ್ತಿಪರತೆ ಇದೆ. ಉಪ ಚುನಾವಣೆ ಮುಗಿಯುವವರೆಗೂ ಇರುತ್ತದೆ. ಅಧಿಕಾರಿಗಳು ಸರ್ಕಾರ ಹೇಳಿದಂತೆ ಕೇಳುತ್ತಾರೆ. ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ ಎಂದು ಹೇಳಿದ್ದಾರೆ.