ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿಕೆಶಿ ತಾಯಿ ಗೌರಮ್ಮ, ನನ್ನ ಮಗನ ಮೇಲೆ ಸಿಬಿಐಗೆ, ಇ.ಡಿ.ಗೆ ಪ್ರೀತಿ ಜಾಸ್ತಿ ಹೀಗಾಗಿ ಪದೇ ಪದೇ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಳಿಗ್ಗೆಯಿಂದ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ. ಅಧಿಕಾರಿಗಳು ಏನು ಬೇಕಾದರೂ ತೆಗೆದುಕೊಂಡು ಹೋಗಲಿ, ಬೀರುವಿನಿಂದ ಹಿಡಿದು ಏನೇನು ಸಿಗುತ್ತೋ ಎಲ್ಲವನ್ನೂ ದೋಚಿಕೊಂಡು ಹೋಗಲಿ. ನನಗೆ ಹೊಸ ಬೀರು ತಂದುಕೊಡಲಿ. ಮೇಲಿಂದ ಮೇಲೆ ಅಧಿಕಾರಿಗಳು ಬಂದು ದಾಳಿ ನಡೆಸುತ್ತಿದ್ದಾರೆ. ನಾವು ಏನಂತ ಉತ್ತರ ಕೊಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮಗನನ್ನು ಹಾಗೂ ನಮ್ಮನ್ನು ಸಿಬಿಐ ಅಧಿಕಾರಿಗಳು ಅವರ ಕಚೇರಿಗೆ ಕರೆದುಕೊಂಡು ಹೋಗಿ ಇಟ್ಟುಕೊಂಡು ತನಿಖೆ ನಡೆಸಲಿ. ನಮಗೆ ಎರಡು ಹೊತ್ತಿನ ಊಟ ಕೊಟ್ಟರೆ ಸಾಕು ಎಂದು ಕಿಡಿಕಾರಿದ್ದಾರೆ.