ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ರೈತರ ಪರ ಘೋಷಣೆ ಇರುವ ಟಿ-ಶರ್ಟ್ ಧರಿಸಿ ಹೊರಟ ಫೋಟೋವೊಂದು ಕಳೆದ ಕೆಲ ದಿನಗಳಿಂದ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಆದರೆ, ಆ ಫೋಟೋ ಫೇಕ್ ಎಂಬುದು ಪತ್ತೆಯಾಗಿದೆ.
ಸೆ. 20 ರಂದು ಭಾರತ ಸರ್ಕಾರ ವಿವಾದಾತ್ಮಕ ರೈತ ಮಸೂದೆಗೆ ಅನುಮೋದನೆ ನೀಡಿದೆ. ದೇಶಾದ್ಯಂತ ರೈತರು ಮಸೂದೆ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಎಲ್ಲೆಡೆ ಈ ಬಗ್ಗೆ ಚರ್ಚೆ ನಡೆದಿದೆ.
ಈ ಸಂದರ್ಭದಲ್ಲಿ ಕೆಂಪು, ಹಳದಿ ಮಿಶ್ರಿತ ಬಣ್ಣದಲ್ಲಿ ಘೋಷಣೆ ಬರೆದ ಕಪ್ಪು ಶರ್ಟ್ ಧರಿಸಿದ ದೀಪಿಕಾ ಅವರು ಎಲ್ಲಿಗೋ ಹೊರಟ ಫೋಟೋವನ್ನು ಸೆ.25 ರಂದು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಫೋಟೋವನ್ನು 8 ಸಾವಿರ ಜನ ಶೇರ್ ಮಾಡಿದ್ದಾರೆ.
“ನಾನು ಭಾರತೀಯ ರೈತರ ಪರವಾಗಿದ್ದೇನೆ” ಎಂದು ಹಿಂದಿಯಲ್ಲಿ ಟಿ-ಶರ್ಟ್ ಮೇಲೆ ಬರೆಯಲಾದ ಫೋಟೊ ವೈರಲ್ ಆಗಿದೆ. ಆಕೆ ಯಾವುದೇ ಸಂದೇಶವಿಲ್ಲದ ಕಪ್ಪು ಟಿ-ಶರ್ಟ್ ತೊಟ್ಟು ಹೋಗುತ್ತಿರುವ ಫೋಟೋದ ಮೇಲೆ ಸಂದೇಶ ಬರೆದು ಯಾರೋ ಹರಿಬಿಟ್ಟಿರುವುದು ಖಚಿತವಾಗಿದೆ.