ಫ್ಲೊರಿಡಾ: ಮಹಿಳೆಯೊಬ್ಬಳು ಲಾಟರಿ ಗೆದ್ದರೂ ಟಿಕೆಟ್ ಕಳೆದುಕೊಂಡು, ಬಹುಮಾನದ ಹಣ ಪಡೆಯಲು ಪಡಿಪಾಟಲುಪಟ್ಟ ಘಟನೆ ಫ್ಲೊರಿಡಾದಲ್ಲಿ ನಡೆದಿದೆ.
ರಿಡ್ಜ್ ಮ್ಯಾನರ್ ನಗರದ ಸ್ಯು ಬೋರ್ಜಸ್ ಎಂಬ 62 ವರ್ಷದ ಮಹಿಳೆ ರಾಜ್ಯ ಲಾಟರಿಯ ಎರಡನೇ ಬಹುಮಾನದ ಮೊತ್ತ 1 ಸಾವಿರ ಡಾಲರ್ (73,300 ರೂ.) ಗೆದ್ದಿದ್ದರು. ಜುಲೈ 29 ರಂದು ಲಾಟರಿ ಡ್ರಾ ಫಲಿತಾಂಶ ಪ್ರಕಟವಾಗಿತ್ತು. ಆದರೆ, ಆಗ ಕೊರೊನಾ ಕಾರಣಕ್ಕೆ ಲಾಟರಿ ಕಚೇರಿ ಬಂದಾಗಿತ್ತು.
ಫಲಿತಾಂಶ ಪ್ರಕಟವಾದ 7 ದಿನದ ಒಳಗೆ ಬಹುಮಾನ ಪಡೆಯಬೇಕು ಎಂದು ಲಾಟರಿ ಕಂಪನಿ ವೆಬ್ ಸೈಟ್ ನಲ್ಲಿ ತಿಳಿಸಲಾಗಿತ್ತು. ಇದರಿಂದ ಬೋರ್ಜಸ್ ಅವರು ಲಾಟರಿ ಟಿಕೆಟ್ ನ್ನು ಪ್ರತಿಷ್ಠಿತ ಅಂಚೆಯ ಮೂಲಕ ಲಾಟರಿ ಕಂಪನಿಯ ಕೇಂದ್ರ ಕಚೇರಿ ಇರುವ ನಗರಕ್ಕೆ ಕಳಿಸಿದ್ದರು.
ವಾರ ಕಳೆದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಬೋರ್ಜಸ್ ಲಾಟರಿ ಕಂಪನಿ ಕಚೇರಿಗೆ ಕರೆ ಮಾಡಿ ಕೇಳಿದ್ದರು. ತಮಗೆ ಅಂಚೆ ಮೂಲಕ ಟಿಕೆಟ್ ತಲುಪಿಲ್ಲ. ಟಿಕೆಟ್ ಇದ್ದರೆ ಮಾತ್ರ ಬಹುಮಾನದ ಮೊತ್ತ ನೀಡುವುದಾಗಿ ಕಂಪನಿ ಅಧಿಕಾರಿಗಳು ತಿಳಿಸಿದ್ದರು.
ಅಂಚೆ ಕಂಪನಿ ವೆಬ್ ಸೈಟ್ ಕವರ್ ತಲುಪಿಸಲಾಗಿಲ್ಲ ಎಂದು ವಿವರಣೆ ನೀಡುತ್ತಿತ್ತು. ಟಿಕೆಟ್ ಇದ್ದ ಕವರ್ ಎಲ್ಲಿದೆ ಎಂಬ ಸ್ಪಷ್ಟತೆ ಅಂಚೆ ಕಂಪನಿಗೆ ಇರಲಿಲ್ಲ. ಇದರಿಂದ ಅಂಚೆ ಕಂಪನಿ ತಪ್ಪಿಗೆ ಮಹಿಳೆ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬಂದಿತ್ತು. ಹಾಗಾಗಿ ಆಕೆ ದಿಕ್ಕು ಕಾಣದೇ ಸ್ಥಳೀಯ ಪತ್ರಿಕಾ ಕಚೇರಿಯ ಮೊರೆ ಹೋಗಿದ್ದರು. ಪತ್ರಿಕೆಯಲ್ಲಿ ವರದಿಯಾದ ನಂತರ ಲಾಟರಿ ಕಂಪನಿ ಸ್ವಯಂ ತನಿಖೆಯೊಂದನ್ನು ಕೈಗೊಂಡು ಮಹಿಳೆಯ ಖಾತೆಗೆ ಹಣ ಪಾವತಿಸಿದೆ.