ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಮಗಳನ್ನು ಬೆತ್ತಲಾಗಿ ನಿಲ್ಲಿಸಿದ ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಕಳೆದ 13 ವರ್ಷಗಳಿಂದ ತಪ್ಪು ಮಾಡಿದ್ದ ಸಂದರ್ಭದಲ್ಲಿ ಟೆರೇಸ್ ಮೇಲೆ ಬೆತ್ತಲಾಗಿ ನಿಲ್ಲಿಸಿ ಶಿಕ್ಷೆ ವಿಧಿಸುವ ನೆಪದಲ್ಲಿ ತಂದೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಪುತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ಮಗಳು ತಪ್ಪು ಮಾಡಿದಾಗಲೆಲ್ಲ ಟೆರೇಸ್ ಮೇಲೆ ಬೆತ್ತಲಾಗಿ ನಿಲ್ಲುವಂತೆ ಮಾಡಿ ಅನುಚಿತವಾಗಿ ಸ್ಪರ್ಶಿಸಿ ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾನೆ. ಇಂತಹ ಸಂದರ್ಭದಲ್ಲಿ ತಾಯಿ ತನ್ನನ್ನು ರಕ್ಷಿಸಲು ಯಾವುದೇ ಪ್ರಯತ್ನ ಮಾಡಿಲ್ಲವೆಂದು ಹುಡುಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಬಾಲಕಿಗೆ ಮಾತ್ರವಲ್ಲದೆ, ಆಕೆಯ ಹಿರಿಯ ಸಹೋದರಿಗೂ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 28 ರಂದು ಭಾರತೀಯ ದಂಡ ಸಂಹಿತೆ, ಪೋಕ್ಸೋ ಕಾಯ್ದೆ, ಬಾಲಾಪರಾಧಿ ನ್ಯಾಯ ಕಾಯ್ದೆ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಆತನ ಬಂಧನಕ್ಕೆ ತಂಡ ರಚಿಸಲಾಗುವುದು ಎಂದು ಹಿರಿಯ ಇನ್ಸ್ ಪೆಕ್ಟರ್ ಮೋನಾ ಜಾಡಾನ್ ಹೇಳಿದ್ದಾರೆ.