ನಿವೃತ್ತಿ ನಂತರ ಪಿಂಚಣಿ ಪಡೆಯುತ್ತಿರುವವರು ಪ್ರತಿ ವರ್ಷ ನವೆಂಬರ್ 1 ರಿಂದ ನವೆಂಬರ್ 30ರ ಒಳಗಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿತ್ತು. 80 ವರ್ಷ ಮೇಲ್ಪಟ್ಟವರು ಈ ಸರ್ಟಿಫಿಕೇಟ್ ಕೊಡಬೇಕಾಗಿರಲಿಲ್ಲ. ಆನ್ ಲೈನ್ ನಲ್ಲೇ ಪ್ರಮಾಣಪತ್ರ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದೀಗ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಈ ಅವಧಿಯನ್ನು ವಿಸ್ತರಿಸಲಾಗಿದೆ.
ಕೊರೊನಾ ಹೆಚ್ಚಾಗಿ ಹಿರಿಯ ನಾಗರಿಕರನ್ನು ಬಾಧಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಜೀವನ ಪ್ರಮಾಣ ಪತ್ರ ಸಲ್ಲಿಕೆ ಅವಧಿಯನ್ನು ಡಿಸೆಂಬರ್ 31, 2020 ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕುಗಳಿಗೆ ಭೇಟಿ ನೀಡುತ್ತಿರುವ ಕಾರಣ ಕೊರೊನಾ ಸೋಂಕಿಗೊಳಗಾಗಬಹುದೆಂಬ ಹಿನ್ನಲೆಯಲ್ಲಿ ಅವಧಿಯನ್ನು ವಿಸ್ತರಿಸುವ ನಿರ್ಧಾರಕ್ಕೆ ಬರಲಾಗಿದೆ.
ಪಿಂಚಣಿದಾರರಿಗೆ ನವೆಂಬರ್ 30 ರೊಳಗೆ ಜೀವನ ಪ್ರಮಾಣ ಪತ್ರ ಸಲ್ಲಿಸದಿದ್ದರೂ ಅವರುಗಳಿಗೆ ಪಿಂಚಣಿ ಈ ಹಿಂದಿನಂತೆ ಅವರುಗಳ ಖಾತೆಗೆ ಜಮೆಯಾಗುತ್ತದೆ. ಪಿಂಚಣಿದಾರರ ಅವಲಂಬಿತರಿಗೂ ಇದೇ ನಿಯಮ ಅನ್ವಯವಾಗುತ್ತದೆ. ಡಿಸೆಂಬರ್ 31, 2020 ರ ವರೆಗೂ ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ಈಗ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷಕ್ಕೆ ಮಾತ್ರ ಡಿಸೆಂಬರ್ 31 ರ ವರೆಗೆ ಅವಧಿಯಿದ್ದು, ಮುಂದಿನ ದಿನಗಳಲ್ಲಿ ಹಳೆ ನಿಯಮ ಮುಂದುವರೆಯಲಿದೆ.