ಲಾಕ್ ಡೌನ್, ಕೊರೊನಾ ಕಾರಣದಿಂದ ಮಕ್ಕಳು ಮನೆಯಿಂದ ಹೊರ ಹೋಗುತ್ತಿಲ್ಲ ಎಂಬುದೇನೋ ನಿಜ. ಆದರೆ ಮನೆಯಲ್ಲೇ ಬಗೆಬಗೆಯ ಜಂಕ್ ಫುಡ್ ಗಳು ತಯಾರಾಗುತ್ತಿವೆ. ದೈಹಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಸಾಧ್ಯವಾಗದ ಮಕ್ಕಳು ಈಗ ಅನಾವಶ್ಯಕ ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ.
ಮುಂಚೆ ವಾರಕ್ಕೊಮ್ಮೆ ಮನೆಯಿಂದ ಹೊರಹೋಗಿ ಜಂಕ್ ಫುಡ್ ಸೇವಿಸುತ್ತಿದ್ದ ಮಕ್ಕಳು ಈಗ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಇವುಗಳನ್ನೆಲ್ಲಾ ಸೇವಿಸುತ್ತಿದ್ದಾರೆ. ಮನೆಯಲ್ಲಿ ಟಿವಿ, ಮೊಬೈಲ್, ಕಂಪ್ಯೂಟರ್ ಮುಂದೆಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ದೈಹಿಕ ಚಟುವಟಿಕೆ, ಆಟ, ಓಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ.
ಮಕ್ಕಳಿಗೆ ಮಳಿಗೆಗಳಲ್ಲಿ ಸಿಗುವ ರೆಡಿಮೇಡ್ ಆಹಾರ ನೀಡುವ ಬದಲು ತರಕಾರಿ, ಕಾಳುಗಳನ್ನು ತಿನ್ನಿಸಿ. ಕೊಬ್ಬು ಹೆಚ್ಚಿರುವ ವಸ್ತುಗಳನ್ನು ವಾರಕ್ಕೊಮ್ಮೆ ಮಾತ್ರ ಬಳಸಿ. ಜ್ಯೂಸ್ ತಯಾರಿಸಿ, ಹಣ್ಣುಗಳನ್ನು ತಿನ್ನಿಸಿ.
ಎಣ್ಣೆಯಲ್ಲಿ ಕರಿದ ವಸ್ತುಗಳನ್ನು ನಿತ್ಯ ತಿನ್ನಿಸಬೇಡಿ. ಹದಿನೈದು ದಿನಕ್ಕೊಮ್ಮೆ ಎಣ್ಣೆ ತಿಂಡಿ ಎಂಬ ನಿಯಮ ಮಾಡಿ. ಕಂಪ್ಯೂಟರ್, ಮೊಬೈಲ್ ನೋಡುವಾಗ ಊಟ ಅಥವಾ ತಿಂಡಿ ತಿನ್ನುವುದನ್ನು ನಿಲ್ಲಿಸಿ. ನಿತ್ಯ ನಿಗದಿತ ಸಮಯಕ್ಕೆ ಏಳುವಂತೆ ಹೇಳಿಕೊಡಿ. ಮನೆಯೊಳಗೆ ಮಾಡಬಹುದಾದ ವ್ಯಾಯಾಮಗಳನ್ನು ಹೇಳಿಕೊಡಿ.