ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡಲು ನಾನಾ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಹಳಷ್ಟು ಮಂದಿ ಕಷ್ಟ ಪಡುತ್ತಿದ್ದಾರೆ. ಕೆಲವರು ತಮ್ಮ ಈ ಬಿಡುವಿನ ವೇಳೆಯನ್ನು ತಮ್ಮಿಷ್ಟದ ಹವ್ಯಾಸದಲ್ಲಿ ಭಾಗಿಯಾಗುತ್ತಾ ಕಳೆಯುತ್ತಿದ್ದಾರೆ.
ಇದೇ ವೇಳೆ, ಈ ಸಮಯದ ಸರಿಯಾದ ಸದ್ಭಳಕೆ ಮಾಡಿಕೊಂಡ ಕೇರಳದ ಮಹಿಳೆಯೊಬ್ಬರು ಮೂರು ತಿಂಗಳ ಅವಧಿಯಲ್ಲಿ ಆನ್ಲೈನ್ 350 ವಿವಿಧ ಕೋರ್ಸ್ಗಳನ್ನು ಪೂರೈಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕೊಚ್ಚಿಯ ಎಲಮಕ್ಕರಾದ ನಿವಾಸಿಯಾದ ಆರತಿ ರಘುನಾಥ್ ಈ ರೀತಿಯಲ್ಲಿ ಲಾಕ್ಡೌನ್ ಸದ್ಬಳಕೆ ಮಾಡಿಕೊಂಡಿದ್ದಾರೆ.
ಇಲ್ಲಿನ ಎಂಇಎಸ್ ಕಾಲೇಜಿನಲ್ಲಿ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಎರಡನೇ ವರ್ಷದ ಎಂ.ಎಸ್ಸಿ. ಓದುತ್ತಿರುವ ಆರತಿ, ವಿಶ್ವ ಖ್ಯಾತ ವಿವಿಗಳಾದ ಜಾನ್ ಹಾಕಿನ್ಸ್, ಡೆನ್ಮಾರ್ಕ್ ತಾಂತ್ರಿಕ ವಿವಿ, ವರ್ಜಿನಿಯಾ ವಿವಿ, ನ್ಯೂಯಾರ್ಕ್ ರಾಜ್ಯ ವಿವಿ, ಕೊಲರಾಡೋ ಬೌಲ್ಡರ್, ಕೋಪನ್ ಹೇಗನ್ ವಿವಿ, ರಾಚೆಸ್ಟರ್ ವಿವಿ ಹಾಗೂ ಎಮೋರಿ ವಿವಿಗಳು ಕೊಡಮಾಡುವ ಕೋರ್ಸ್ಗಳನ್ನು ಸಹ ಪೂರೈಸಿದ್ದಾರೆ.