ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೊಸ ಕಾನೂನುಗಳ ವಿರುದ್ಧ ವಿರೋಧ ಪಕ್ಷಗಳು ನಿರಂತರ ಪ್ರತಿಭಟನೆ ಕೈಗೊಂಡಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಹಿರಿಯ ಸಚಿವ ರಾಜನಾಥ್ ಸಿಂಗ್, ಕನಿಷ್ಠ ಬೆಂಬಲ ಬೆಲೆಯನ್ನು ಹಾಗೆಯೇ ಉಳಿಸಿಕೊಳ್ಳುವುದಿಲ್ಲ. ಮುಂದಿನ ವರ್ಷಗಳಲ್ಲಿ ನಿರಂತರವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾನು ಒಬ್ಬ ರೈತನ ಮಗನಾಗಿ ಈ ವಿಷಯವನ್ನು ಸ್ಪಷ್ಟಪಡಿಸುತ್ತಿದ್ದೇನೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡುವುದಿಲ್ಲ ಎಂದು ಭರವಸೆ ನೀಡುವುದಾಗಿ ತಿಳಿಸಿದ್ದಾರೆ.
ವಿವಾದಿತ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರಪತಿ ಭವನ ಮತ್ತು ಸಂಸತ್ ಭವನಕ್ಕೆ ಕೆಲವೇ ಮೀಟರ್ ದೂರದಲ್ಲಿ ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ್ದಾರೆ. ಸೈನಿಕರಿಗೆ ಶಸ್ತ್ರಾಸ್ತ್ರ ಪ್ರಮುಖವಾಗಿರುವಂತೆ ರೈತರಿಗೆ ಟ್ರ್ಯಾಕ್ಟರ್ ಮುಖ್ಯವಾಗಿದೆ. ಅದನ್ನು ಸುಡುವ ಮೂಲಕ ನಮ್ಮ ರೈತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಕೇಂದ್ರ ಹೊಸ ನಿಯಮ ಜಾರಿಗೆ ತಂದಿದೆ. ರೈತರು ತಮಗೆ ಇಷ್ಟಬಂದ ಕಡೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಸ್ಪರ್ಧೆ ಹೆಚ್ಚುವುದರಿಂದ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂದು ತಿಳಿಸಿದ್ದಾರೆ.