ಬೆಂಗಳೂರು: ಶಿರಾ ಹಾಗೂ ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮೈತ್ರಿ ಎಂದರೆ ಕಾಂಗ್ರೆಸ್ ಜೆಡಿಎಸ್ ಎಂಬ ಭಾವನೆ ಬೇಡ, ದೇವೇಗೌಡರ ಹೆಸರು ಬಳಸಿ ಆ ಪಕ್ಷದ ನಾಯಕರು ಲಾಭ ಪಡೆದುಕೊಳ್ಳುವುದೂ ಬೇಡ ಎಂದು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ನನ್ನ ನೇತೃತ್ವದ ಸರ್ಕಾರವನ್ನು ಬೀಳಿಸಿದ್ದ, ರಾಜಸ್ಥಾನದಲ್ಲಿ ಬಿ ಎಸ್ ಪಿ ಶಾಸಕರನ್ನು ಸೆಳೆದ, ಮಹಾರಾಷ್ಟ್ರದಲ್ಲಿ ಪ್ರತಿ ದಿನ ಸರ್ಕಾರವನ್ನೇ ಅಲುಗಾಡಿಸುತ್ತಿರುವ ಕಾಂಗ್ರೆಸ್ ನ ವರ್ತನೆ ಮೈತ್ರಿಗೆ ತಾನು ಯೋಗ್ಯವಲ್ಲ ಎಂಬುದರ ಸಂದೇಶ ಎಂದು ಗುಡುಗಿದ್ದಾರೆ.
ಮಾಧ್ಯಮಗಳಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಜೊತೆ ಮೈತ್ರಿ ಇಲ್ಲ ಎಂದಿದ್ದಾರೆ. ಇಷ್ಟಕ್ಕೂ ಜೆಡಿಎಸ್ ನಿಂದ ಅವರ ಜೂತೆ ಮೈತ್ರಿ ಪ್ರಸ್ತಾಪ ಇಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. 2018ರ ಚುನಾವಣಾ ಫಲಿತಾಂಶದ ಬಳಿಕ ದೇವೇಗೌಡರ ಮನೆ ಬಾಗಿಲಿಗೆ ಕಾಂಗ್ರೆಸ್ ಬಂತು ಹೊರತು ನಾವು ಯಾರೂ ಕಾಂಗ್ರೆಸ್ ಬಾಗಿಲಿಗೆ ಹೋಗಿಲ್ಲ ಎಂದು ತಿಳಿಸಿದ್ದಾರೆ.
ಶಿರಾ ಈ ಹಿಂದೆ ನಾವು ಗೆದ್ದ ಕ್ಷೇತ್ರ. ಆದರಿಂದು ಶಿರಾದಲ್ಲಿ ಸತ್ಯಣ್ಣ ಸಾವಿನಿಂದ ಸೂತಕದ ಮನೆಯಲ್ಲಿದ್ದೇವೆ. ನಾವು ಎದುರಿಸಬೇಕಿರುವ ನೋವಿನ ಚುನಾವಣೆ ಇದು. ಇತರ ಪಕ್ಷದವರಿಗೆ ಇದು ಲಾಭ-ನಷ್ಟದ ವಿಚಾರ. ಆದರೆ ನಾವು ಶಿರಾದಲ್ಲಿ ನಮ್ಮ ನೋವಿಗೆ ಗೆಲುವಿನ ಮೂಲಕ ಪರಿಹಾರ ಹುಡುಕುತ್ತೇವೆ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ಎರಡೂ ಕ್ಷೇತ್ರಗಳಿಗೂ ಸೂಕ್ತ ಅಭ್ಯರ್ಥಿಯನ್ನು ಘೋಷಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.