ನೋಯ್ಡಾ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶ ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಪೊಲೀಸರು ತನ್ನ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಹತ್ರಾಸ್ ಗೆ ತೆರಳುತ್ತಿದ್ದರು. ಯಮುನಾ ಎಕ್ಸ್ ಪ್ರೆಸ್ ವೇ ಬಳಿ ರಾಹುಲ್ ಗಾಂಧಿ ಕಾರು ಬರುತ್ತಿದ್ದಂತೆಯೇ ಪೊಲೀಸರು ತಡೆದಿದ್ದಾರೆ.
ಕಾರು ತಡೆಯುತ್ತಿದ್ದಂತೆಯೇ ಕಾರಿನಿಂದ ಇಳಿದು ಕಾರ್ಯಕರ್ತರ ಜೊತೆ ನಡೆದು ಸಾಗಿದ ರಾಹುಲ್ ಗಾಂಧಿ ಪಾದಯಾತ್ರೆ ಮೂಲಕ ತೆರಳಲು ಮುಂದಾಗಿದ್ದಾರೆ. ಪೊಲೀಸರು ರಾಹುಲ್ ಗಾಂಧಿಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರಾಹುಲ್ ಗಾಂಧಿ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಸ್ಥಳದಲ್ಲಿ ಕೆಲ ಕಾಲ ಹೈ ಡ್ರಾಮಾ ನಡೆದಿದ್ದು, ಪೊಲೀಸರು ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಾತನಾಡಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶ ಪೊಲೀಸರು ನನ್ನ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ನನ್ನನ್ನು ಹಾಗೂ ಕಾರ್ಯಕರ್ತರನ್ನು ಕೆಳಕ್ಕೆ ತಳ್ಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.