ನವದೆಹಲಿ: 2020 -21ರ ಶೈಕ್ಷಣಿಕ ವರ್ಷ ಪುನಾರಂಭ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ.
ಶೇಕಡ 71 ರಷ್ಟು ಪೋಷಕರು ಅಕ್ಟೋಬರ್ ನಲ್ಲಿ ಶಾಲೆ ಪ್ರಾರಂಭವಾದರೂ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಶೇಕಡ 28ರಷ್ಟು ಪೋಷಕರು ಮಾತ್ರ ಶಾಲೆ ಆರಂಭವಾದಲ್ಲಿ ಮಕ್ಕಳನ್ನು ಕಳುಹಿಸುವುದಾಗಿ ಹೇಳಿದ್ದು ಶೇಕಡ 34ರಷ್ಟು ಪೋಷಕರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಏಪ್ರಿಲ್ 2021ರ ನಂತರ ಶಾಲೆ ತೆರೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಪುನಾರಂಭದ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಶೇಕಡ 71 ರಷ್ಟು ಪೋಷಕರು ಅಕ್ಟೋಬರ್ ನಲ್ಲಿ ಶಾಲೆ ಆರಂಭವಾದರೂ ತಮ್ಮ ಮಕ್ಕಳನ್ನು ಕಳಿಸುವುದಿಲ್ಲವೆಂದು ತಿಳಿಸಿದ್ದಾರೆ.
ಪ್ರತಿದಿನ 80 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಮಾರುಕಟ್ಟೆ, ರೆಸ್ಟೋರೆಂಟ್, ಬಾರ್, ಮೆಟ್ರೋ ಮೊದಲಾದ ಸೇವೆಗಳು ಪ್ರಾರಂಭವಾದ ನಂತರ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ.
ದೇಶದಲ್ಲಿ ಲಾಕ್ ಡೌನ್ ಜಾರಿಯಾದ ನಂತರ ಕಳೆದ ಮಾರ್ಚ್ ನಿಂದ ಶಾಲೆಗಳು ಬಂದ್ ಆಗಿದೆ. ಶಾಲೆಗಳ ಬಗ್ಗೆ ಪೋಷಕರ ನಾಡಿಮಿಡಿತವನ್ನು ಪಡೆಯಲು ಸಮೀಕ್ಷೆ ನಡೆಸಿದ್ದು, 217 ಜಿಲ್ಲೆಗಳ 14,550 ಪೋಷಕರ ಪ್ರತಿಕ್ರಿಯೆ ಪಡೆಯಲಾಗಿದೆ.
ಅಕ್ಟೋಬರ್ ನಲ್ಲಿ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಿರ್ಧರಿಸಿದ್ದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಿರಾ? ಎಂದು ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿತ್ತು. ಶೇಕಡ 71 ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಶೇಕಡ 20 ರಷ್ಟು ಮಂದಿ ಖಚಿತ ಉತ್ತರ ನೀಡಿಲ್ಲ. ದೇಶದ ಬಹುಭಾಗದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹಬ್ಬದ ಸೀಸನ್ ಇರುತ್ತದೆ. ಕೊರೋನಾ ಹೆಚ್ಚಿರುವ ಸಂದರ್ಭದಲ್ಲಿ ಶಾಲೆ ಬೇಡವೇ ಬೇಡ ಎನ್ನುವ ಅಭಿಪ್ರಾಯ ಕೇಳಿಬಂದಿದೆ.