ಕೊರೊನಾಕ್ಕೆ ಲಸಿಕೆ ಕಂಡುಹಿಡಿಯುವ ಭರದಲ್ಲಿ ಔಷಧಿ ಕಂಪನಿಗಳಿಂದ ಶಾರ್ಕ್ ಗಳ ಮಾರಣಹೋಮ ನಡೆಯಲಿದೆಯೇ ಎನ್ನುವ ಆತಂಕವನ್ನು ಪರಿಸರ ಸಂರಕ್ಷಕರು ವ್ಯಕ್ತಪಡಿಸಿದ್ದಾರೆ.
ಲಸಿಕೆ ತಯಾರಿಕೆಗಾಗಿ ಶಾರ್ಕ್ ಗಳ ಮೇಲ್ಮೈ ಮತ್ತು ಪಿತ್ತಜನಕಾಂಗ (ಯಕೃತ್ತು) ದ ತೈಲ ಬಳಸಲಾಗುತ್ತದೆ. ಇದು ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇದಕ್ಕಾಗಿ ಶಾರ್ಕ್ ಗಳನ್ನು ಕೊಂದು ಅದರಿಂದ ತೈಲ ಪಡೆಯಬೇಕಾಗುತ್ತದೆ.
ಇದರ ಪರೀಕ್ಷೆಗಾಗಿ 176 ಜನರನ್ನು ಆಯ್ಕೆ ಮಾಡಿದ್ದು, 17 ಜನರ ಮೇಲೆ ಪ್ರಯೋಗಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತಿಳಿಸಿದೆ. ಇಷ್ಟಕ್ಕೆ ಕನಿಷ್ಠ 5 ಶಾರ್ಕ್ ಗಳನ್ನು ಬಲಿ ಕೊಡಬೇಕಾಗುತ್ತದೆ ಎಂದು ಅಮೆರಿಕಾದ ಶಾರ್ಕ್ ಅಲ್ಲೀಸ್ ಎಂಬ ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಎಂಎಫ್ 59 ರೋಗನಿರೋಧಕದಲ್ಲಿ 9.75 ಮಿಲಿ ಗ್ರಾಮ್ ನಷ್ಟು ಶಾರ್ಕ್ ಮೇಲ್ಮೈ ಹಾಗೂ ಪಿತ್ತಜನಕಾಂಗದ ತೈಲ ಇರುತ್ತದೆ. ಒಂದು ಅಂದಾಜಿನ ಪ್ರಕಾರ ಭೂಮಿಯ ಮೇಲಿನ ಮನುಷ್ಯರೆಲ್ಲರಿಗೂ ಒಂದು ಡೋಸ್ ಎಂಎಫ್ 59 ನೀಡಲು ಲಕ್ಷಾಂತರ ಶಾರ್ಕ್ ಗಳನ್ನು ಸಾಯಿಸಬೇಕಾಗುತ್ತದೆ. ಅಕಸ್ಮಾತ್ ಒಂದು ಡೋಸ್ ಲಸಿಕೆಯಿಂದ ನಿರೀಕ್ಷಿತ ಯಶಸ್ಸು ಸಿಗದೆ ಎರಡು ಡೋಸ್ ಕೊಡಬೇಕಾಗಿ ಬಂದರೆ, 5 ಲಕ್ಷ ಶಾರ್ಕ್ ಗಳು ಬಲಿಯಾಗಲಿವೆ.
ಈಗಾಗಲೇ ಕಾಸ್ಮೊಟಿಕ್ಸ್ ತಯಾರಿಕೆಗಾಗಿ ವರ್ಷಕ್ಕೆ 2.7 ದಶಲಕ್ಷ ಶಾರ್ಕ್ ಗಳು ಬಲಿಯಾಗುತ್ತಿವೆ. 2024 ರ ವೇಳೆಗೆ ಇದರ ಪ್ರಮಾಣ ದ್ವಿಗುಣಗೊಳ್ಳಲಿದ್ದು, 2027 ರ ಹೊತ್ತಿಗೆ ತ್ರಿಗುಣ ಆಗುವ ಸಾಧ್ಯತೆಯೂ ಇದೆ.
ಒಂದೆಡೆ ಏರಿಕೆಯಾಗುತ್ತಿರುವ ಕೊರೋನಾ ಸೋಂಕಿತರು, ಇನ್ನೊಂದೆಡೆ ಲಸಿಕೆ ನೆಪದಲ್ಲಿ ಔಷಧಿ ಕಂಪನಿಗಳು ಕೊಲ್ಲುವುದರಿಂದ ಇಳಿಕೆಯಾಗುತ್ತಿರುವ ಶಾರ್ಕ್ ಗಳು. ಎರಡರ ಬಗ್ಗೆಯೂ ವಿಜ್ಞಾನಿಗಳು ತಲೆ ಕೆಡಿಸಿಕೊಳ್ಳಬೇಕಿದೆ.