ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳನ್ನು ಅಕ್ಟೋಬರ್ 15ರಿಂದ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಗದಿತ ದಿನಾಂಕದಂದು ಶಾಲಾ – ಕಾಲೇಜುಗಳು ಆರಂಭವಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಈ ಹಿಂದೆ ರಾಜ್ಯ ಸರ್ಕಾರ ಶಾಲಾ – ಕಾಲೇಜುಗಳನ್ನು ತೆರೆದು 9ರಿಂದ 12ನೇ ತರಗತಿವರೆಗಿನ ಮಕ್ಕಳು ಪಠ್ಯಕ್ಕೆ ಸಂಬಂಧಿಸಿದ ತಮ್ಮ ಅನುಮಾನಗಳನ್ನು ಶಿಕ್ಷಕರಿಂದ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿತ್ತಾದರೂ ಆ ಬಳಿಕ ತನ್ನ ತೀರ್ಮಾನವನ್ನು ಹಿಂಪಡೆದುಕೊಂಡಿತ್ತು. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಈಗ ಶಾಲಾ – ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದರೂ ಸಹ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ. ಬದಲಾಗಿ ಪ್ರಕರಣಗಳು ಏರಿಕೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಶಾಲಾ – ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾಗಲಿದೆಯಾ ಎಂಬ ಕುತೂಹಲ ಮನೆ ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಕ್ಕಳು ಶಾಲಾ – ಕಾಲೇಜುಗಳಿಗೆ ಹಾಜರಾಗಲು ಪೋಷಕರ ಅನುಮತಿ ಕಡ್ಡಾಯವಾಗಿದ್ದು, ಅಂತಿಮವಾಗಿ ಸರ್ಕಾರ ಹಾಗೂ ಪೋಷಕರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.