ಸಾಮಾನಿಡಲು ಜಾಗ ಸಿಗದಿದ್ದರೆ, ಸೀಟು ಸಿಗದಿದ್ದರೆ ಹಾರಾಡುವುದು, ಕೂಗಾಡುವುದು, ಜಗಳ ಮಾಡುವುದೆಲ್ಲ ಬರೀ ಬಸ್ಸು, ರೈಲಲ್ಲಿ ಮಾತ್ರವಲ್ಲ ವಿದೇಶಿ ವಿಮಾನಗಳಲ್ಲೂ ನಡೆಯುತ್ತವೆ.
ಅಂತಹುದೇ ಒಂದು ವಿಡಿಯೋ ಮಿಚಿಗನ್ ನಗರಿಯಿಂದ ವೈರಲ್ ಆಗಿದ್ದು, ಮಹಿಳೆಯೊಬ್ಬಳು ಲಗ್ಗೇಜ್ ಇಡಲಾಗದೆ ಪರದಾಡಿ ರೊಚ್ಚಿಗೆದ್ದು ಇಡೀ ವಿಮಾನವನ್ನೇ ಅಲ್ಲೋಲಕಲ್ಲೋಲ ಮಾಡಿದ್ದಾಳೆ.
ಮೇಲ್ಛಾವಣಿಯಲ್ಲಿ ಕ್ರಮಬದ್ಧವಾಗಿ ಸಾಮಾನುಗಳನ್ನು ಪೇರಿಸಿಡಲು ಬಾರದೆ ಪಡಿಪಾಟಲುಪಟ್ಟ ಮಹಿಳೆ, ಸೀಟಿನ ಮೇಲೆ ಹತ್ತಿ ಲಗ್ಗೇಜ್ ತಳ್ಳಲು ಹೋಗಿ ತಾನೇ ಕೆಳಗೆ ಬಿದ್ದಿದ್ದಾಳೆ.
ಇದರಿಂದ ಸಿಟ್ಟಿಗೆದ್ದು ಸೀಟ್ ಗಳ ಮೇಲೆ ನಡೆದಾಡುತ್ತಾ, ಕೂಗಾಡಿಕೊಂಡು ಅಕ್ಕ-ಪಕ್ಕ ಇದ್ದವರನ್ನೂ ಶಪಿಸುತ್ತಾ ಸಾಗಿದ್ದಾಳೆ. ಅವಳ ಈ ವರ್ತನೆ ಕಂಡು ಸಹಪ್ರಯಾಣಿಕರು ದಂಗಾಗಿದ್ದು, ವಿಡಿಯೋ ಕೂಡ ಮಾಡಿಕೊಂಡಿದ್ದಾರೆ.
ಕೊನೆಗೆ ಆಟಾಟೋಪ ಸಹಿಸಲಾರದೆ ಮೂವರು ವ್ಯಕ್ತಿಗಳು ಆಕೆಯನ್ನು ಹೊತ್ತೊಯ್ದರು.
ಆಕೆಯೊಳಗೆ ದೆವ್ವ ಹೊಕ್ಕಿರಬೇಕು ಎಂದು ಒಂದಿಷ್ಟು ಕಮೆಂಟ್ ಮಾಡಿದ್ದರೆ, 1973 ರ ದಿ ಎಕ್ಸಾರ್ಸಿಟ್ (ಮಾಂತ್ರಿಕ) ಚಿತ್ರ ನೋಡಿದಂತಾಯಿತು ಎಂದಿದ್ದಾರೆ.