
ಅಬುಧಾಬಿಯಲ್ಲಿ ನಡೆದ ಐಪಿಎಲ್ ನ 11 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲಿ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನ್ ಬೈರ್ ಸ್ಟೋವ್ ಉತ್ತಮ ಜೊತೆಯಾಟವಾಡಿದರು. ಡೇವಿಡ್ ವಾರ್ನರ್ 33 ಎಸೆತಗಳಲ್ಲಿ 45 ರನ್ ಗಳಿಸಿದ ಬಳಿಕ ಅಮಿತ್ ಮಿಶ್ರ ಬೌಲಿಂಗ್‌ನಲ್ಲಿ ಔಟಾದರು. ನಂತರ ಮನೀಶ್ ಪಾಂಡೆ ಕೇವಲ 3 ರನ್ ಗಳಿಸಿ ಔಟಾದರು. ಜಾನಿ ಬೈರ್ ಸ್ಟೋವ್ 53ರನ್ ಗಳಿಸಿದ್ದು, ರಬಾಡ ಬೌಲಿಂಗ್‌ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ ನಲ್ಲಿ 41ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್ ಔಟಾದರು. ಒಟ್ಟಾರೆ ಸನ್ ರೈಸರ್ಸ್ ತಂಡ 4 ವಿಕೆಟ್ ನಷ್ಟಕ್ಕೆ 162ರನ್ ದಾಖಲಿಸಿತು.
ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ಪೃಥ್ವಿ ಶಾ ಕೇವಲ 2 ರನ್ ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಔಟಾದರು. ನಂತರ ನಾಯಕ ಶ್ರೇಯಸ್ ಅಯ್ಯರ್ ಕೂಡ 17 ರನ್ ಗಳಿಸಿ ರಶೀದ್ ಖಾನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶಿಖರ್ ಧವನ್ 34 ರನ್ ಗಳಿಸಿ ಔಟಾದರು. ನಂತರ ಕ್ರೀಸ್ ಗೆ ಬಂದ ಹಿಟ್ ಶಿಮ್ರೋನ್ ಹೆಟ್ಮೈರ್ 21 ರನ್ ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಔಟಾದರು. ರಿಷಬ್ ಪಂತ್ ಕೂಡ 21 ರನ್ ಸಿಡಿಸಿ ಔಟಾಗಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ನಡುಗಿ ಹೋಯಿತು. 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರಿ ತಲುಪವಲ್ಲಿ ವಿಫಲವಾಗಿದ್ದು, ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಗೆ ಶರಣಾಯಿತು. ಸನ್ ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್ ಗಳಿಂದ ಜಯ ಸಾಧಿಸಿತು.