ಸೋಮವಾರದಂದು ದುಬೈನಲ್ಲಿ ನಡೆದ ಐಪಿಎಲ್ ನ 10ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ. ತಂಡದ ಆರಂಭಿಕ ಆಟಗಾರರಾದ ದೇವದತ್ ಪಡಿಕಲ್ ಹಾಗೂ ಆರೊನ್ ಫಿಂಚ್ ಉತ್ತಮ ಜೊತೆಯಾಟವಾಡಿದರು ಆರೊನ್ ಫಿಂಚ್ 54ರನ್ ಗಳಿಸಿ ಟ್ರೆಂಟ್ ಬೋಲ್ಟ್ ಬೌಲಿಂಗ್‌ನಲ್ಲಿ ಔಟಾದರು. ನಂತರ ವಿರಾಟ್ ಕೊಹ್ಲಿ ಕೇವಲ 3ರನ್ ಗಳಿಸಿ ಔಟಾದರು. ಬಳಿಕ ಆರಂಭಿಕ ಆಟಗಾರ ದೇವದತ್ ಪಡಿಕಲ್ 54 ರನ್ ಗಳಿಸಿದ್ದು ವಿಕೆಟ್ ಒಪ್ಪಿಸಿದರು. ನಂತರ ಎಬಿ ಡಿ ವಿಲಿಯರ್ಸ್ ಹಾಗೂ ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಇನ್ನೂರರ ಗಡಿ ದಾಟಲು ಸಹಾಯಕರಾದರು. ಎಬಿ ಡಿ ವಿಲಿಯರ್ಸ್ 24 ಎಸೆತಗಳಲ್ಲಿ (55) ಹಾಗೂ ಶಿವಂ ದುಬೆ 10 ಎಸೆತಗಳಲ್ಲಿ (27)ರನ್ ಗಳಿಸಿದರು. ಆರ್.ಸಿ.ಬಿ ತಂಡ 3 ವಿಕೆಟ್ ನಷ್ಟಕ್ಕೆ 201ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ನಾಯಕ ರೋಹಿತ್ ಶರ್ಮ 8 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಔಟಾದರು. ನಂತರ ಸೂರ್ಯಕುಮಾರ್ ಯಾದವ್ ಕೂಡ ಶೂನ್ಯಕ್ಕೆ ಔಟಾದರು. ಈಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಗೆ ಬೆನ್ನಲುಬಾಗಿ ನಿಂತಿದ್ದು, ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 14 ರನ್ ಗಳಿಸಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯ ಕೂಡ ಆ್ಯಡಂ ಝಂಪಾ ಬೌಲಿಂಗ್ನಲ್ಲಿ ಔಟಾದರು. ಕೊನೆಯ ಹಂತದವರೆಗೂ ಇಶಾನ್ ಕಿಶನ್ ಹಾಗೂ ಕೀರನ್ ಪೊಲಾರ್ಡ್ ಉತ್ತಮ ಜೊತೆಯಾಟವಾಡಿದ್ದು, ಈಶಾನ್ ಕಿಶನ್ 58 ಎಸೆತಗಳಲ್ಲಿ (99) ರನ್ ಗಳಿಸಿ ಔಟಾದರು. ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಅಜೇಯ 60 ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಕೀರನ್ ಪೊಲಾರ್ಡ್ ಬೌಂಡರಿ ಗಳಿಸಿದ್ದು, ಈ ಮೂಲಕ ಪಂದ್ಯ ಟೈ ಆಯಿತು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 7 ರನ್ ಗಳಿಸಿದ್ದು, ಗುರಿ ಬೆನ್ನತ್ತಿದ ಆರ್.ಸಿ.ಬಿ. ತಂಡ 8 ರನ್ ಗಳ ಗುರಿ ತಲುಪುವ ಮೂಲಕ ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸಿ ಜಯ ಸಾಧಿಸಿದರು. ಈ ಮೂಲಕ ಆರ್.ಸಿ.ಬಿ. ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು.