ಕೋಲ್ಕತ್ತಾ: ಬೆಂಗಾಲಿ ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ದುರ್ಗಾ ಮಾತೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದುರ್ಗಾ ಮಾತೆಯ ಪೋಸ್ ನೀಡಿದ ನಟಿಯ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಖ್ಯಾತ ನಟಿ ಹಾಗೂ ಸಂಸದೆ ನುಸ್ರತ್ ಇತ್ತೀಚೆಗೆ ಇನ್ ಸ್ಟಾಗ್ರಾಂ ನಲ್ಲಿ ದುರ್ಗೆಯ ಅವತಾರದಲ್ಲಿ ಕಾಣಿಸಿಕೊಂಡಿರುವ ತಮ್ಮ ಫೋಟೋ ಶೂಟ್ ಕುರಿತು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋಗೆ ಹಲವರು ಆಕ್ರೋಶ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಹೆಸರನ್ನು ಬದಲಿಸಿಕೊಳ್ಳುವಂತೆಯೂ ಒತ್ತಾಯಿಸಿದ್ದಾರೆ. ಅಲ್ಲದೇ ನಟಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಮುಸ್ಲೀಂ ಕುಟುಂಬದವರಾದ ನುಸ್ರತ್ ಜಹಾನ್, ಹಿಂದೂ ವ್ಯಕ್ತಿ ಉದ್ಯಮಿ ನಿಖಿಲ್ ಜೈನ್ ಎಂಬುವವರನ್ನು ವಿವಾಹವಾಗಿದ್ದಾರೆ. ಅಲ್ಲದೇ ಆಗಾಗ ನಟಿ ಹಿಂದೂ ಸಂಪ್ರದಾಯದ ಪೂಜೆ-ಪುನಸ್ಕಾರಗಳಲ್ಲಿ ಭಾಗಿಯಾಗುತ್ತ ತಮ್ಮ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ದುರ್ಗಾ ಮಾತೆಯ ಅವತಾರದಲ್ಲಿ ಕಾಣಿಸಿಕೊಂಡಿರುವ ಅವರ ವಿಡಿಯೋ ಹಿಂದೂ-ಮುಸ್ಲೀಂ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದೆ.