ಬೆಂಗಳೂರು: ಕೃಷಿ ವಿರೋಧಿ ಕಾಯ್ದೆ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿನೂತನ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕತ್ತೆಯ ಮೇಲೆ ಸವಾರಿ ನಡೆಸಿ ಗಮನ ಸೆಳೆದಿದ್ದಾರೆ.
ವಿನೂತನ ಪ್ರತಿಭಟನೆಗಳಿಗೆ ಹೆಸರಾಗಿರುವ ವಾಟಾಳ್ ನಾಗರಾಜ್ ಇಂದು ಕೂಡ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ತಮ್ಮದೇ ಶೈಲಿಯಲ್ಲಿ ಸಾಥ್ ನೀಡಿದ್ದಾರೆ. ಮೈಸೂರು ಪೇಟಾ, ಕೂಲಿಂಗ್ ಗ್ಲಾಸ್, ಭಾರಿ ಪೋಷಾಕು ಧರಿಸಿ ಕತ್ತೆಯ ಮೇಲೆ ಕುಳಿತು ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಮೆಜೆಸ್ಟಿಕ್ ಗೆ ಆಗಮಿಸಿದರು.
ಈ ವೇಳೆ ಮಾತನಾಡಿದ ಅವರು, ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಕತ್ತೆಯ ಮೇಲೆ ಮೆರವಣಿಗೆ ಹೊರಡುವ ಮೂಲಕ ನಾನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ರೈತರ ಶಾಲು ಹೊದ್ದು, ಪ್ರಮಾಣ ವಚನ ಸ್ವೀಕರಿಸಿರುವ ಭ್ರಷ್ಟಾಚಾರದ ಚಕ್ರವರ್ತಿ ಸಿಎಂ ಯಡಿಯೂರಪ್ಪ ರೈತರಿಗೆ ವಿರುದ್ಧವಾದ ಕಾನೂನು ಜಾರಿಗೆ ತರಲು ಮುಂದಾಗಿದ್ದಾರೆ. ಅನ್ನದಾತನ ಸಂಕಷ್ಟವನ್ನು ಅರಿತು ಕೂಡಲೇ ಈ ಮಸೂದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.