ದೇಶದಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೋವಿಡ್-19 ಚುಚ್ಚುಮದ್ದನ್ನು ಜನರಿಗೆ ಲಭ್ಯವಾಗುವಂತೆ ಮಾಡಲು 80,000 ಕೋಟಿ ರೂ.ಗಳ ಅಗತ್ಯವಿದೆ ಎಂದು ಸೆರಮ್ ಸಂಸ್ಥೆಯ ಸಿಇಓ ಅದರ್ ಪೂನಾವಾಲಾ ಮಾಡಿರುವ ಟ್ವೀಟ್ ಸದ್ದು ಮಾಡುತ್ತಿದೆ.
“ಭಾರತ ಹಾಗೂ ವಿದೇಶಗಳಲ್ಲಿ ಇರುವ ಚುಚ್ಚುಮದ್ದು ಉತ್ಪಾದಕರಿಗೆ ಸರಿಯಾಗಿ ಪ್ಲಾನ್ ಮಾಡಿ, ಅವರಿಗೆ ನಮ್ಮ ದೇಶದ ಅಗತ್ಯತೆಗಳಿಗೆ ತಕ್ಕಂತೆ ಕ್ರೋಢೀಕರಣ ಹಾಗೂ ವಿತರಣೆ ಮಾಡಲು ಮುಂದಾಗಬೇಕಿದೆ” ಎಂದು ಪೂನಾವಾಲಾ ಟ್ವಿಟ್ ಮಾಡಿದ್ದಾರೆ. ಆದರೆ ಈ 80,000 ಕೋಟಿ ರೂ.ಗಳ ಲೆಕ್ಕಾಚಾರ ಹೇಗೆ ಬಂತು ಎಂಬುದನ್ನು ಪೂನಾವಾಲಾ ಬಹಿರಂಗ ಮಾಡಿಲ್ಲ.
ಭಾರತರಲ್ಲಿ ಎರಡು ಚುಚ್ಚುಮದ್ದುಗಳನ್ನು ಸೆರಮ್ ಸಂಸ್ಥೆ ಉತ್ಪಾದಿಸಿ ವಿತರಣೆ ಮಾಡಬಹುದಾಗಿದೆ. ಇವುಗಳಲ್ಲಿ ಒಂದು ಆಕ್ಸ್‌ಫರ್ಡ್ ವಿವಿಯ ಆಸ್ಟ್ರಾಝೆನೆಕಾ ಮತ್ತು ಅಮೆರಿಕದ ಬಯೋಟೆಕ್ ಸಂಸ್ಥೆ ನೋವಾಕ್ಸ್ ಅಭಿವೃದ್ಧಿಪಡಿಸಿರುವ ಚುಚ್ಚುಮದ್ದುಗಳಾಗಿವೆ.
ಪ್ರತಿಯೊಬ್ಬರಿಗೂ $3ಕ್ಕೆ ಈ ಚುಚ್ಚುಮದ್ದು ದೊರೆಯುವಂತೆ ಮಾಡಲು ಕೆಳ ಹಾಗೂ ಮಧ್ಯಮ ಆದಾಯವಿರುವ ದೇಶಗಳಲ್ಲಿ ಪ್ಲಾನ್ ಮಾಡಲಾಗುತ್ತಿದೆ ಎಂದು ಸೆರಮ್ ಈ ಹಿಂದೆ ತಿಳಿಸಿತ್ತು. ಇದೇ ಲೆಕ್ಕಾಚಾರದಂತೆ, ದೇಶದ 130 ಕೋಟಿ ಜನರಿಗೆಲ್ಲಾ ಈ ಚುಚ್ಚುಮದ್ದುಗಳನ್ನು ನೀಡಲು 57,486 ಕೋಟಿ ರೂ.ಗಳು ಬೇಕಾಗುತ್ತದೆ ಎಂದು ಮನಿಕಂಟ್ರೋಲ್ ಲೆಕ್ಕಾಚಾರ ಮಾಡಿದೆ.
ಇದೇ ವೇಳೆ, ಝೈಡಸ್ ಕ್ಯಾಡಿಲಾ ಚೇರ್ಮನ್ ಪಂಕಜ್ ಪಟೇಲ್ ಮಾತನಾಡಿ, ದೇಶದ 130 ಕೋಟಿ ಜನರಿಗೆ ಈ ಚುಚ್ಚುಮದ್ದುಗಳನ್ನು ಉತ್ಪಾದಿಸಿ ಕೊಡಲು ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು 3,000-5,000 ಕೋಟಿ ರೂ.ಗಳವರೆಗೂ ಹೂಡಿಕೆ ಮಾಡಬೇಕಾಗುತ್ತದೆ ಎಂದಿದ್ದಾರೆ.