ಪಾಸಿಟಿವ್ ಪೇ ವ್ಯವಸ್ಥೆಯಡಿ 2021 ರ ಜನವರಿ 1 ರಿಂದ ಆನ್ ಲೈನ್ ನಲ್ಲೇ ಚೆಕ್ ಅನ್ನು ಡೆಪಾಸಿಟ್ ಮಾಡಬಹುದಾಗಿದೆ. ಎಸ್.ಎಂ.ಎಸ್., ಮೊಬೈಲ್ ಆಪ್, ಇಂಟರ್ ನೆಟ್ ಬ್ಯಾಂಕಿಂಗ್, ಎಟಿಎಂ ಮೂಲಕ ಚೆಕ್ ನಂಬರ್, ದಿನಾಂಕ ಮುಂತಾದ ಮಾಹಿತಿ ನಮೂದಿಸಿ ಚೆಕ್ ನಿಂದ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು ಎಂದು ಆರ್.ಬಿ.ಐ.ಹೇಳಿದೆ.
ಚೆಕ್ ಬ್ಯಾಂಕಿಂಗ್ ಮೋಸ ತಡೆಯಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್.ಪಿ.ಸಿ.ಐ.) ಬ್ಯಾಂಕ್ ಗಳ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆ ಸಿ.ಟಿ.ಎಸ್.ನಲ್ಲಿ ಪಾಸಿಟಿವ್ ಪೇಮೆಂಟ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದೆ. ಆರ್.ಬಿ.ಐ. ಬರುವ ವರ್ಷ ಪ್ರಾರಂಭದಿಂದ ಪಾಸಿಟಿವ್ ಪೇ ವ್ಯವಸ್ಥೆ ಜಾರಿಗೆ ನಿರ್ಧರಿಸಿದೆ. 50 ಸಾವಿರ ಮೇಲಿನ ಚೆಕ್ ನಗದೀಕರಣಕ್ಕೆ ಕೆಲ ಕೀಗಳನ್ನು ಮರು ದೃಡೀಕರಣ ಮಾಡಬೇಕಿದೆ. 5 ಲಕ್ಷಕ್ಕಿಂತ ಕಡಿಮೆ ಮೊತ್ತದ ಚೆಕ್ ಡೆಪಾಸಿಟ್ ಮಾಡಲು ಗ್ರಾಹಕರಿಗೆ ಪಾಸಿಟಿವ್ ಪೇ ವ್ಯವಸ್ಥೆ ಅನುಸರಿಸುವುದು ಕಡ್ಡಾಯವಲ್ಲ. ಆದರೆ, ಅದಕ್ಕಿಂತ ಹೆಚ್ಚಿದ ಮೊತ್ತದ ಚೆಕ್ ಡೆಪಾಸಿಟ್ ಗೆ ಈ ನೂತನ ವ್ಯವಸ್ಥೆ ಕಡ್ಡಾಯ ಮಾಡಲಾಗುತ್ತಿದೆ.
ಚೆಕ್ ದಾಖಲೆಗಳನ್ನು ಪಾಸಿಟಿವ್ ಪೇ ವ್ಯವಸ್ಥೆಯಲ್ಲಿ ಹಾಕಿದ ನಂತರ ನಗದೀಕರಣ ಅಥವಾ ಬ್ಯಾಂಕ್ ವರ್ಗಾವಣೆಯ ಮುಂಚೆ ಚೆಕ್ ಅಸಲಿಯತ್ತಿನ ಬಗ್ಗೆ ಮರು ಪರಿಶೀಲನೆಯಾಗಲಿದೆ. ಚೆಕ್ ಟ್ರಂಕೆಶನ್ ಸಿಸ್ಟಂ (ಸಿಟಿಎಸ್ )ನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಚೆಕ್ ಹಾಕಿದ ಹಾಗೂ ಹಣ ನೀಡುವ ಬ್ಯಾಂಕ್ ಗಳು ನಿವಾರಣಾ ಕ್ರಮವನ್ನು ಕೈಗೊಳ್ಳಬೇಕು ಎಂದು ಆರ್.ಬಿ.ಐ.ಹೇಳಿದೆ.