ಕಾಂಬೋಡಿಯಾದ ನೆಲಬಾಂಬ್ ಪೀಡಿತ ಪ್ರದೇಶಗಳಲ್ಲಿ ಲ್ಯಾಂಡ್ ಮೈನ್ಗಳನ್ನು ಪತ್ತೆ ಮಾಡಲು ನೆರವಾದ ಇಲಿಯೊಂದಕ್ಕೆ ಬ್ರಿಟಿಷ್ ಚಾರಿಟಿಯ ಅಗ್ರ ಪೌರ ಪ್ರಶಸ್ತಿಯ ಗೌರವ ಸಂದಿದೆ.
ಮಗಾವಾ ಹೆಸರಿನ ಆಫ್ರಿಕನ್ ಪೌಚ್ಡ್ ಇಲಿಯೊಂದು ಕಳೆದ ಏಳು ವರ್ಷಗಳಿಂದ 39 ಲ್ಯಾಂಡ್ ಮೈನ್ಗಳು ಹಾಗೂ 28 ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡಲು ನೆರವಾಗಿದೆ. ಜೀವಗಳನ್ನು ಉಳಿಸುವ ತನ್ನ ಕೈಂಕರ್ಯಕ್ಕಾಗಿ ಈ ಇಲಿಗೆ PDSAನ ಚಿನ್ನದ ಪದಕವನ್ನು ಸಹ ನೀಡಲಾಗಿದೆ.
1917ರಲ್ಲಿ ಆರಂಭಗೊಂಡ People’s Dispensary for Sick Animals ಸಂಸ್ಥೆಯು ಉಚಿತ ಪಶುವೈದ್ಯಕೀಯ ಕ್ಲಿನಿಕ್ ನಡೆಸುತ್ತಿತ್ತು. 1943ರಿಂದಲೂ ಸಹ ಈ ಸಂಸ್ಥೆ ಹಿರೋಯಿಕ್ ಪ್ರಾಣಿಗಳನ್ನು ಸನ್ಮಾನಿಸುತ್ತಾ ಬಂದಿದೆ.
ಈ ಗಂಡು ಇಲಿಯು ತಂಝಾನಿಯಾದ ಮೊರೊಗೊರೋನಲ್ಲಿ ನವೆಂಬರ್ 5, 2014ರಲ್ಲಿ ಜನಿಸಿದೆ. 1.23 ಕೆಜಿ ತೂಕ ಇರುವ ಈ ಇಲಿ 70 ಸೆಂಮೀ ಉದ್ದವಿದೆ. ಇಲಿಗಳನ್ನು ಲ್ಯಾಂಡ್ಮೈನ್ ಪತ್ತೆ ಮಾಡುವಂತೆ ತರಬೇತಿ ನೀಡುವ ಬೆಲ್ಜಿಯಂ ಮೂಲದ ಸಂಸ್ಥೆಯೊಂದು ಮಗಾವಾಗೆ ತರಬೇತಿ ನೀಡಿದೆ.