ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೊಟೀಸ್ ಹಿನ್ನೆಲೆಯಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲಾ ವಿಚಾರಣೆಗೆ ಹಾಜರಾಗಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಫ್ಯಾಷನ್ ಲೋಕದ ದಿಗ್ಗಜ ರಮೇಶ್ ಡೆಂಬ್ಲಾ ಹೆಸರು ಕೇಳಿಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಸಿಸಿಬಿ ಕಚೇರಿಗೆ ಇದೀಗ ರಮೇಶ್ ಹಾಜರಾಗಿದ್ದು, ಸಿಸಿಬಿ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದಾರೆ.
ರಮೇಶ್ ಡೆಂಬ್ಲಾನನ್ನು ವಿಚಾರಣೆಗೆ ಒಳಪಡಿಸಿರುವ ಸಿಸಿಬಿ ಅಧಿಕಾರಿಗಳ ತಂಡ, ಅವರ ಮೊಬೈಲ್ ನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಜನಪ್ರಿಯ ಫ್ಯಾಷನ್ ಡಿಸೈನರ್ ಆಗಿರುವ ರಮೇಶ್, ಪೇಜ್-3 ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು ಮಾತ್ರವಲ್ಲ ಹಲವಾರು ಡ್ರಗ್ಸ್ ಪಾರ್ಟಿಗಳಲ್ಲಿ ಕೂಡ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಮೇಶ್ ವಿಚಾರಣೆ ಆರಂಭವಾಗಿದೆ.
ಬೆಂಗಳೂರಿನಲ್ಲಿ ತಮ್ಮದೇ ಫ್ಯಾಷನ್ ಡಿಸೈನಿಂಗ್ ಸಂಸ್ಥೆಯನ್ನು ಕೂಡ ಹೊಂದಿರುವ ರಮೇಶ್ ಡೆಂಬ್ಲಾ, ಹಲವಾರು ಸ್ಟಾರ್ ನಟ-ನಟಿಯರನ್ನು, ರೂಪದರ್ಶಿಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.