ಬೆಂಗಳೂರು: ಖ್ಯಾತ ಗಾಯಕ, ಸ್ವರ ಮಾಂತ್ರಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ, ದಕ್ಷಿಣ ಭಾರತದ ಸಂಗೀತ ಕ್ಷೇತ್ರಕ್ಕೆ ಮುಖ್ಯ ನ್ಯಾಯಾಧೀಶರಂತಿದ್ದರು. ಅವರ ಅಗಲಿಕೆ ತುಂಬಾ ಭಾವುಕ ವಿಷಯ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಎಸ್.ಪಿ.ಬಿ. ಅವರಂತಹ ಹಾಡುಗಾರರು ಸಿಗಲು ಸಾಧ್ಯವಿಲ್ಲ. ಅವರನ್ನು ಗುರುತಿಸಿದ್ದೇ ಜಾನಕಮ್ಮನವರು. ಅವರಿಗೆ ಸಿಕ್ಕ ಅವಕಾಶಗಳು ಮತ್ಯಾರಿಗೂ ಸಿಗಲು ಸಾಧ್ಯವಿಲ್ಲ. ದಕ್ಷಿಣ ಭಾರತ ಸಂಗೀತ ಕ್ಷೇತ್ರದ ನ್ಯಾಯಾಧೀಶರನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಎಸ್.ಪಿ.ಬಿ. ಇಡೀ ವಿಶ್ವಕ್ಕೆ ಒಬ್ಬ ಅದ್ಭುತ ಗಾಯಕ. ಪ್ರತಿಭೆ ದೇವರು ಕೊಟ್ಟ ವರ ಅದನ್ನು ನಿಧಾನವಾಗಿ ಖರ್ಚುಮಾಡಿಕೊಂಡು ಬದುಕಬೇಕು ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಜಾಣತನದಿಂದ ಪ್ರತಿಭೆ ಖರ್ಚು ಮಾಡುತ್ತಾ ಚೆನ್ನಾಗಿ ಬದುಕಬೇಕು ಎಂದು ಬಾಲಸುಬ್ರಹ್ಮಣ್ಯಂ ಹೇಳುತ್ತಿದ್ದರು. ಎಸ್.ಪಿ.ಬಿ.ಯಂತಹ ಅದ್ಭುತ ವ್ಯಕ್ತಿ, ಗಾಯಕ ಐನೂರು ವರ್ಷಕ್ಕೆ ಒಮ್ಮೆ ಹುಟ್ಟುತ್ತಾರೆ. ಕೊರೊನಾ ಸಂಕಷ್ಟದಿಂದಾಗಿ ನಾವು ಅವರ ಅಂತಿಮ ದರ್ಶನ ಕೂಡ ಪಡೆಯಲಾಗದ ಸ್ಥಿತಿಯಲ್ಲಿದ್ದೇವೆ. ಎಸ್.ಪಿ.ಬಿ.ಯವರ ಸಾವು ತೀವ್ರ ಆಘಾತವನ್ನುಂಟುಮಾಡಿದೆ ಎಂದಿದ್ದಾರೆ.