ಬೆಂಗಳೂರು: ಅನಾರೋಗ್ಯದಿಂದ ಇಹಲೋಕ ತ್ಯಜಿಸಿರುವ ಸ್ವರ ಮಾಂತ್ರಿಕ, ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕೊನೆಯ ಬಾರಿ ಕನ್ನಡದಲ್ಲಿ ಹಾಡೊಂದಕ್ಕೆ ಧ್ವನಿಯಾಗಿದ್ದರು. ಆ ಹಾಡು ಈಗ ಕನ್ನಡಿಗರ ಹೃದಯದಲ್ಲಿ ಅಚ್ಚೊತ್ತಿ ನಿಂತಿದೆ. ಅದೇ ಮಹಾಮಾರಿ ಕೊರೊನಾ ಕುರಿತ ಜಾಗೃತಿ ಗೀತೆ.
ಹೌದು, ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡದ ಗೀತ ರಚನೆಕಾರ, ಸಾಹಿತಿ ಜಯಂತ್ ಕಾಯ್ಕಿಣಿ ಅವರು ಬರೆದ ಕೊರೊನಾ ಕುರಿತ ಜಾಗೃತಿ ಗೀತೆಯನ್ನು ಹಾಡಿದ್ದರು. ಈ ಜಾಗೃತಿ ಗೀತೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಮನ್ನಣೆಗಳಿಸಿತ್ತು.
’ಕಾಣದಂತೆ ಆಕ್ರಮಿಸಿದೆ ವೈರಿ ಕರೋನಾ…’ ಎಂಬ ಕೊರೊನಾ ಜಾಗೃತಿ ಹಾಡನ್ನು ಎಸ್.ಪಿ.ಬಿ. ಹಾಡಿದ್ದರು. ಕೊರೊನಾ ಕುರಿತು ಕನ್ನಡ ನಾಡಿಗೆ ತಮ್ಮ ಹಾಡಿನ ಮೂಲಕ ಜಾಗೃತಿ ಮೂಡಿಸಿದ್ದ ಅದೇ ಗಾನ ಗಾರುಡಿಗ ಎಸ್.ಪಿ.ಬಿ. ಇದೀಗ ಕೊರೊನಾ ಸೋಂಕಿನಿಂದಲೇ ಆಸ್ಪತ್ರೆಗೆ ದಾಖಲಾಗಿ ವಿಧಿವಶರಾಗಿರುವುದು ನಿಜಕ್ಕೂ ನೋವಿನ ಸಂಗತಿ.