ಬೆಂಗಳೂರು: ಭೂ ಸುಧಾರಣೆ, ಎಪಿಎಂಸಿ ಕಾಯಿದೆ ತಿದ್ದುಪಡಿಗೆ ವಿರೋಧಿಸಿ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿದ್ದು, ರಸ್ತೆಗಳಲ್ಲೇ ಉರುಳುಸೇವೆ ನಡೆಸುವ ಮೂಲಕ ರೈತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಾವಿರಾರು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ 34ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿವೆ.
ರೈತ ವಿರೋಧಿ ಕಾಯಿದೆ ಖಂಡಿಸಿ ಒಂದೆಡೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತರು ರಸ್ತೆ ಮಧ್ಯೆ ಉರುಳುಸೇವೆ ನಡೆಸಿ ಆಕ್ರೋಶ ಹೊರ ಹಾಕಿದರೆ, ಇನ್ನೊಂದೆಡೆ ರಸ್ತೆ ತಡೆ ನಡೆಸಿ ರಸ್ತೆ ಮಧ್ಯೆಯೇ ಧರಣಿ ಕುಳಿತ ನೂರಾರು ರೈತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರೈತರು ವಾಗ್ದಾಳಿ ನಡೆಸಿದ್ದಾರೆ.