ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಅವರು ಅವಿಶ್ವಾಸ ನಿರ್ಣಯ ಮಂಡಿಸುವುದರಿಂದ ನನಗೆ ವಿಶ್ವಾಸ ಬರುತ್ತದೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನಾಯಕರು 6 ತಿಂಗಳಿಗೊಮ್ಮೆ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಿರಲಿ. ಅದರಿಂದ ನನಗೆ ಇನ್ನಷ್ಟು ವಿಶ್ವಾಸ ಬರುತ್ತದೆ. ಕಾಂಗ್ರೆಸ್ ನವರು ನನಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ರಾಜ್ಯದ ಜನರಿಗೂ ಸರ್ಕಾರದ ಮೇಲಿನ ವಿಶ್ವಾಸ ಹೆಚ್ಚಲಿದೆ ಎಂದರು.
ಈಗಾಗಲೇ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ಪ್ರಸ್ತಾಪಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ವೈಫಲ್ಯ, ಸಿಎಂ ಕುಟುಂಬದ ವಿರುದ್ಧ ಬ್ರಷ್ಟಾಚಾರ ಆರೋಪ, ಕೊರೊನಾ ಸಲಕರಣೆಗಳಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ, ಆರ್ಥಿಕ ದುಸ್ಥಿತಿ, ಆಡಳಿತ ಪಕ್ಷದ ಸಚಿವ-ಶಾಸಕರಲ್ಲೇ ಭಿನ್ನಾಭಿಪ್ರಾಯ ಸೇರಿದಂತೆ ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದೆ.