ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರಿಗೆ ನುಗ್ಗೆ ಸೊಪ್ಪಿನ ಪಲ್ಯ ಇಷ್ಟವಾಗಲ್ಲ. ಅಂಥವರು ಈ ನುಗ್ಗೆ ಸೊಪ್ಪಿನ ಕೂಟು ಮಾಡಿಕೊಂಡು ಒಮ್ಮೆ ಸವಿದು ನೋಡಿ. ಇದು ತುಂಬಾ ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
2 ಕಪ್ – ನುಗ್ಗೆಸೊಪ್ಪು, 1 – ಟೊಮೆಟೊ, ½ ಟೀ ಸ್ಪೂನ್ – ಅರಿಶಿನ, ½ ಟೀ ಸ್ಪೂನ್ – ಸಾಂಬಾರು ಪುಡಿ, ¼ ಕಪ್ – ತೊಗರಿಬೇಳೆ, 1/8 ಕಪ್ – ಹೆಸರುಬೇಳೆ, ನೀರು – ಬೇಕಾಗುವಷ್ಟು, ಸಾಸಿವೆ – 1 ಟೀ ಸ್ಪೂನ್, ½ ಟೀ ಸ್ಪೂನ್ – ಉದ್ದಿನಬೇಳೆ, 10 – ಸಣ್ಣ ಈರುಳ್ಳಿ, , 2 ಟೀ ಸ್ಪೂನ್ – ಎಣ್ಣೆ, 3 – ಹಸಿಮೆಣಸು, 3 ಟೇಬಲ್ ಸ್ಪೂನ್ – ತೆಂಗಿನಕಾಯಿ ತುರಿ, ½ ಟೀ ಸ್ಪೂನ್ – ಜೀರಿಗೆ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹೆಸರುಬೇಳೆ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಹೆಸರುಬೇಳೆ ಹಾಗೂ ತೊಗರಿಬೇಳೆ ಯನ್ನು ಕುಕ್ಕರ್ ಗೆ ಹಾಕಿ 1 ಕಪ್ ನೀರು ಸೇರಿಸಿ ಉಪ್ಪು, ಅರಿಶಿನ ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ಇದು ತಣ್ಣಗಾದ ನಂತರ ಚೆನ್ನಾಗಿ ಬೇಳೆಯನ್ನು ಸೌಟಿನ ಸಹಾಯದಿಂದ ಮತ್ತೆಗಾಗಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಜೀರಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ನುಗ್ಗೆಸೊಪ್ಪನ್ನು ಬಿಡಿಸಿಕೊಂಡು ತೊಳೆದು ಇಟ್ಟುಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ 2 ಹಸಿಮೆಣಸು, ಟೊಮೆಟೊ ಸೇರಿಸಿ ಮಿಕ್ಸ್ ಮಾಡಿ. ನಂತರ ಇದಕ್ಕೆ ನುಗ್ಗೆ ಸೊಪ್ಪು ಹಾಕಿ ಅರಿಶಿನ, ಸಾಂಬಾರು ಪುಡಿ ಸೇರಿಸಿ ಮಿಕ್ಸ್ ಮಾಡಿ ಅಗತ್ಯವಿರುವಷ್ಟು ನೀರು, ಉಪ್ಪು ಸೇರಿಸಿ ಒಂದು ಮುಚ್ಚಳ ಮುಚ್ಚಿ. ಸೊಪ್ಪು ಬೆಂದ ಬಳಿಕ ಬೇಯಿಸಿಟ್ಟುಕೊಂಡ ಬೇಳೆ ಹಾಕಿ ಮಿಕ್ಸ್ ಮಾಡಿ.
ನಂತರ ರುಬ್ಬಿಕೊಂಡ ತೆಂಗಿನಕಾಯಿ ಮಿಶ್ರಣ ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಒಂದು ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಸಣ್ಣ ಈರುಳ್ಳಿ, 1 ಹಸಿಮೆಣಸು ಹಾಕಿ ಒಗ್ಗರಣೆ ತಯಾರಿಸಿ ನುಗ್ಗೆಸೊಪ್ಪಿನ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಬಿಸಿ ಅನ್ನದ ಜತೆ ಸವಿಯಿರಿ.