ಬೆಂಗಳೂರು: ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ ವಿರೋಧಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಸಜ್ಜಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ವಿವಾದಾತ್ಮಕ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಈಗಾಗಲೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬೆಂಗಳೂರಿನ ಮೌರ್ಯ ವೃತ್ತ, ಪ್ರೀಡಂ ಪಾರ್ಕ್, ಮೈಸೂರು ರಸ್ತೆ ಬಳಿ ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದೇ ವೇಳೆ ಗೊರಗುಂಟೆ ಪಾಳ್ಯದಲ್ಲಿ ರೈತರು ರಸ್ತೆಗೆ ಅಡ್ಡಲಾಗಿ ಕುಳಿತು ಧರಣಿ ಆರಂಭಿಸಿದ್ದರು. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ನೂರಾರು ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅನ್ನದಾತನ ಆಕ್ರೋಶ ಮೈಸೂರಿನಲ್ಲಿಯೂ ಭುಗಿಲೆದ್ದಿದ್ದು, ಸಾಂಸ್ಕೃತಿಕ ನಗರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿ ಹೋರಾಟ ನಡೆಸುತ್ತಿದ್ದಾರೆ. ಇನ್ನು 11 ಗಂಟೆ ವೇಳೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭವಾಗುವ ಸಾಧ್ಯತೆಯಿದ್ದು, ಹೆದ್ದಾರಿ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.