ಲಖನೌ: ಕೊರೊನಾ ಪರಿಣಾಮ ಲಖನೌದ ಪ್ರಸಿದ್ಧ ಇಂಡಿಯನ್ ಕಾಫಿ ಹೌಸ್ ಮೆನುವಿನಲ್ಲಿ ಈಗ ವಿಶೇಷ ಕೊರೊನಾ ಕಷಾಯ ಕೂಡ ಸೇರಿಕೊಂಡಿದೆ.
ಇದುವರೆಗೆ ಫಿಲ್ಟರ್ ಕಾಫಿ ಬಿಟ್ಟರೆ ಆಧುನಿಕವಾದ ಕ್ಯಾಪೆಚೀನೊ, ಡಲ್ಗೋನ, ಪ್ರಾಫೆ ಮುಂತಾದ ಕಾಫಿಗಳನ್ನೂ ಸೇರಿಸಿಕೊಳ್ಳದ ಉತ್ತರ ಪ್ರದೇಶದ ಲಖನೌದ ಕಾಫಿ ಹೌಸ್ ಈಗ ಶೀಘ್ರದಲ್ಲಿ ಕಾಡ (ಕಷಾಯ) ನೀಡಲಾರಂಭಿಸಲಿದೆ.
ಲಾಕ್‌ಡೌನ್ ನಂತರ ಜೂನ್ ನಲ್ಲಿ ಕಾಫಿ ಹೌಸ್ ತೆರೆದಿದ್ದು, ತನ್ನ ಮೆನುವಿನಲ್ಲಿ ವಿಶೇಷ ಆಯುರ್ವೇದ ಕಾಡವನ್ನು ಸೇರಿಸಿದೆ. ದಾಲ್ಚಿನಿ, ಲವಂಗ, ಅಮೃತಬಳ್ಳಿ, ಜೇಷ್ಠ ಮದ್ದು, ಏಲಕ್ಕಿ, ಕಾಳು ಮೆಣಸು ಮುಂತಾದ ವಸ್ತುಗಳನ್ನು ಸೇರಿಸಿ ಕಷಾಯ ತಯಾರಿಸಲಾಗುತ್ತದೆ. ಸಣ್ಣ ಕಪ್ ಕಷಾಯಕ್ಕೆ 15 ರೂ. ದೊಡ್ಡ ಕಪ್ ಗೆ 25 ರೂ. ದರ ನಿಗದಿಪಡಿಸಲಾಗಿದೆ.
“ನಮ್ಮ ಗ್ರಾಹಕರು ಮುಖ್ಯವಾಗಿ ಹಿರಿಯ ನಾಗರಿಕರು. ಕಚೇರಿಗಳಿಂದ ಬಿಡುವಿನ ವೇಳೆಯಲ್ಲಿ ಸಮಾಧಾನದಿಂದ ಕಾಲ ಕಳೆಯಲು ಇಲ್ಲಿ ಬರುತ್ತಾರೆ. ಕೊರೊನಾ ಕಾರಣಕ್ಕೆ ಈಗ ಅವರು ಕಾಫಿ ಬಿಟ್ಟರೆ ಬೇರೆಯದನ್ನು ಬಯಸುವುದಿಲ್ಲ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬೂಸ್ಟರ್ ಆಗಿ ಕಾಡ ನೀಡಲಾಗುತ್ತಿದೆ” ಎಂದು ಇಂಡಿಯನ್ ಕಾಫಿ ಹೌಸ್ ನ ಕಾರ್ಯದರ್ಶಿ ಅರುಣಾ ಸಿಂಘ್ ತಿಳಿಸಿದ್ದಾರೆ.
ಕಷಾಯ ನೀಡಲು ಖುಷಿಯಾಗುತ್ತದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಇದೆ ಎಂದು ಯುವ ಎಕ್ಸಿಕ್ಯೂಟಿವ್ ಅಶ್ವಿನಿ ಲಾಲ್ ಹೇಳಿದ್ದಾರೆ.