ವ್ಯಕ್ತಿಯೊಬ್ಬ ಕೊರೊನಾ ಭಯದಲ್ಲಿ ಗಂಟಲು ಸ್ವಚ್ಛ ಮಾಡಲು ಹೋಗಿ ಟೂತ್ ಬ್ರಷ್ ನುಂಗಿ ಸಂಕಷ್ಟಕ್ಕೆ ಸಿಲುಕಿದ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. ವೈದ್ಯರು ಲಘು ಶಸ್ತ್ರ ಚಿಕಿತ್ಸೆ ಮಾಡಿ ಬ್ರಷ್ ಹೊರತೆಗೆದಿದ್ದಾರೆ.
ಅರುಣಾಚಲ ಪ್ರದೇಶದ ಕೆಳಗಿನ ದಿಬಾಂಗ್ ಕಣಿವೆ ವ್ಯಾಪ್ತಿಯಲ್ಲಿ 39 ವರ್ಷದ ವ್ಯಕ್ತಿ ಸೆ.15 ರಂದು ಗಂಟಲು ಸ್ವಚ್ಛ ಮಾಡುವಾಗ ಅಕಸ್ಮಾತ್ ಘಟನೆ ನಡೆದಿದೆ.
19 ಸೆಂಟಿಮೀಟರ್ ಉದ್ದವಿರುವ ಬ್ರಷ್ ಆತನ ಜೀವಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇತ್ತು. ಬ್ರಷ್ ನುಂಗಿದ ನಂತರ ಆತ ಸ್ಥಳೀಯ ಕ್ಲಿನಿಕ್ಗೆ ತೆರಳಿದ್ದ. ಆದರೆ, ಅಲ್ಲಿ ಬ್ರಷ್ ತೆಗೆಯಲು ಸಾಧ್ಯವಿಲ್ಲ ಎಂದು ಬಕಿನ್ ಪರ್ತಿನ್ ಜನರಲ್ ಆಸ್ಪತ್ರೆಗೆ ಕಳಿಸಿಕೊಟ್ಟರು.
ಮೊದಲ ಹಂತದಲ್ಲಿ ಆಸ್ಪತ್ರೆಯಲ್ಲಿ ಎಕ್ಸರೇ ಮಾಡಿದಾಗ ಆತನ ಅನ್ನನಾಳದಲ್ಲಿ ಯಾವುದೇ ಬ್ರಷ್ ಕಾಣಿಸಲಿಲ್ಲ. ನಂತರ ಆತನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿಕೊಂಡು ಲೆಪ್ರೋಟೊಮಿ ಟೆಸ್ಟ್ ಮಾಡಿದಾಗ ವೈದ್ಯರಿಗೆ ಹೊಟ್ಟೆಯಲ್ಲಿ ಬ್ರಷ್ ಕಾಣಿಸಿದೆ.
ಅಚ್ಚರಿ ಎಂದರೆ ಅದಾಗಲೇ ಆತ ಬ್ರಷ್ ನುಂಗಿ 24 ಗಂಟೆಯಾಗುತ್ತ ಬಂದಿದ್ದರೂ ವ್ಯಕ್ತಿಗೆ ಯಾವುದೇ ಗಂಭೀರ ತೊಂದರೆ ಕಾಣಿಸಿರಲಿಲ್ಲ. ಸುಮಾರು 45 ನಿಮಿಷದ ಸಣ್ಣ ಶಸ್ತ್ರ ಚಿಕಿತ್ಸೆ ನಡೆಸಿ ಬ್ರಷ್ ಹೊರತೆಗೆಯಲಾಗಿದೆ. ವ್ಯಕ್ತಿ ಈಗ ಸುಧಾರಿಸಿಕೊಳ್ಳುತ್ತಿದ್ದಾನೆ.