ತೀರಾ ಕಡಿಮೆಯಾಗಿಬಿಟ್ಟಿರುವ ಜನನ ಪ್ರಮಾಣವನ್ನು ವೃದ್ಧಿಸಲು ಮುಂದಾಗಿರುವ ಜಪಾನ್, ಹೊಸದಾಗಿ ಮದುವೆ ಆಗುತ್ತಿರುವವರಿಗೆಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.
‘Newlyweds and New Life Support Project’ ಹೆಸರಿನ ಈ ಯೋಜನೆಯಡಿ, ಮುಂಬರುವ ಏಪ್ರಿಲ್ನಿಂದ ಪುರಸಭೆಯ ವ್ಯಾಪ್ತಿಯಲ್ಲಿಯೇ ಉಳಿಯಲು ಇಚ್ಛಿಸುವ ನವವಿವಾಹಿತರಿಗೆ ಆರು ಲಕ್ಷ ಯೆನ್ (4.2 ಲಕ್ಷ ರೂ.ಗಳು ) ನೆರವಿನ ಧನ ನೀಡಲು ಜಪಾನ್ ಸರ್ಕಾರ ನಿರ್ಧರಿಸಿದೆ. ಈ ನೀತಿಯಲ್ಲಿ ಕೊಡಮಾಡುವ ಧನವು ಬಾಡಿಗೆ, ರಿಬೇಟ್ಗಳು, ಹೂಡಿಕೆಗಳು ಸ್ಥಳಾಂತರದ ವೆಚ್ಚ ಸೇರಿದಂತೆ ಅನೇಕ ವೆಚ್ಚಗಳನ್ನು ಒಳಗೊಳ್ಳಲಿದೆ.
ಈ ಯೋಜನೆಯ ಫಲಾನುಭವಿಗಳಾಗಲು ವಿವಾಹಿತ ಜೋಡಿಯ ವಯಸ್ಸು 40 ವರ್ಷಗಳ ಒಳಗೆ ಇರಬೇಕಿದ್ದು, ಇಬ್ಬರ ಒಟ್ಟು ಆದಾಯವು 5.4 ದಶ ಲಕ್ಷ ಯೆನ್ಗಳಷ್ಟಿರಬೇಕು. ಸದ್ಯ ಚಾಲ್ತಿಯಲ್ಲಿರುವ ನೀತಿಯ ಪ್ರಕಾರ, 4.8 ದಶಲಕ್ಷ ಯೆನ್ಗಳಷ್ಟು ಒಟ್ಟಾರೆ ಆದಾಯವಿರುವ, 35 ವರ್ಷ ವಯಸ್ಸಿನೊಳಗಿನ ಜೋಡಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ.
ಮದುವೆ ಆಗಲು ದುಡ್ಡಿನ ಕೊರತೆಯ ಕಾರಣ ಜಪಾನಿನ ಬಹುತೇಕ ಜನರು ನಿಧಾನವಾಗಿ ಮದುವೆಯಾಗುವ ಅಥವಾ ಅವಿವಾಹಿತರಾಗಿ ಉಳಿಯಲು ನಿರ್ಧಾರ ಮಾಡುತ್ತಿದ್ದಾರೆ.
ತಡವಾದ ಮದುವೆಗಳ ಕಾರಣದಿಂದಾಗಿ ಜಪಾನ್ನಲ್ಲಿ ಪ್ರತಿ ವರ್ಷವೂ ಸಹ ಜನನ ಪ್ರಮಾಣ ಕುಸಿಯುತ್ತಲೇ ಸಾಗುತ್ತಿದೆ. ಕಳೆದ ವರ್ಷದಂದು ಬರೀ 8,65,000ದಷ್ಟು ಜನನಗಳು ಈ ದ್ವೀಪರಾಷ್ಟ್ರದಲ್ಲಿ ದಾಖಲಾಗಿವೆ.