ವಿದೇಶಕ್ಕೆ ಪ್ರಯಾಣ ಬೆಳೆಸಲು ವೀಸಾ ಅವಶ್ಯಕತೆಯಿರುತ್ತದೆ. ಆದ್ರೆ 16 ದೇಶಗಳನ್ನು ಸುತ್ತಲು ಭಾರತೀಯರಿಗೆ ವೀಸಾ ಅವಶ್ಯಕತೆಯಿಲ್ಲ. ಭಾರತದ ಪಾಸ್ ಪೋರ್ಟ್ ಹೊಂದಿದವರು ವೀಸಾ ಮುಕ್ತ ಪ್ರಯಾಣ ಬೆಳೆಸಬಹುದು. ರಾಜ್ಯಸಭೆಯಲ್ಲಿ ವಿ. ಮುರಳೀಧರನ್ ಲಿಖಿತ ಉತ್ತರ ನೀಡುವ ವೇಳೆ ಈ ವಿಷ್ಯ ತಿಳಿಸಿದ್ದಾರೆ. 43 ದೇಶಗಳು ವೀಸಾ ಆನ್ ಅರೈವಲ್ ಸೌಲಭ್ಯವನ್ನು ಒದಗಿಸುತ್ತವೆ ಮತ್ತು 36 ದೇಶಗಳು ಭಾರತೀಯ ಸಾಮಾನ್ಯ ಪಾಸ್ಪೋರ್ಟ್ ಹೊಂದಿರುವವರಿಗೆ ಇ-ವೀಸಾ ಸೌಲಭ್ಯವನ್ನು ಒದಗಿಸುತ್ತವೆ ಎಂದಿದ್ದಾರೆ.
ಬಾರ್ಬಡೋಸ್, ಭೂತಾನ್, ಡೊಮಿನಿಕಾ, ಗ್ರೆನೆಡಾ, ಹೈತಿ, ಹಾಂಕಾಂಗ್ ಎಸ್ಎಆರ್, ಮಾಲ್ಡೀವ್ಸ್, ಮಾರಿಷಸ್, ಮಾಂಟ್ಸೆರಾಟ್, ನೇಪಾಳ, ನಿಯೂ ಐಲ್ಯಾಂಡ್, ಸಮೋಆ, ಸೆನೆಗಲ್, ಟ್ರಿನಿಡಾಡ್- ಟೊಬ್ಯಾಗೊ, ಸೇಂಟ್ ವಿನ್ಸೆಂಟ್ – ಗ್ರೆನೆಡೀನ್ಸ್, ಸರ್ಬಿಯಾ ದೇಶಗಳಿಗೆ ಪ್ರಯಾಣ ಬೆಳೆಸಲು ವೀಸಾ ಅಗತ್ಯವಿರುವುದಿಲ್ಲ.
ಕೇಂದ್ರ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ವೀಸಾ ಆನ್ ಅರೈವಲ್ ಸೌಲಭ್ಯವನ್ನು ಒದಗಿಸುವ ದೇಶಗಳಲ್ಲಿ ಇರಾನ್, ಇಂಡೋನೇಷ್ಯಾ ಮತ್ತು ಮ್ಯಾನ್ಮಾರ್ ಸೇರಿವೆ. ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಮಲೇಷ್ಯಾ ಸೇರಿ 36 ದೇಶಗಳು ಇ- ವೀಸಾ ಸೌಲಭ್ಯ ಒದಗಿಸುತ್ತವೆ.
ಅಂತರರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸುವ ಉದ್ದೇಶದಿಂದ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣ, ವೀಸಾ-ಆನ್-ಅರೈವಲ್ ಮತ್ತು ಇ-ವೀಸಾ ಸೌಲಭ್ಯವನ್ನು ನೀಡುವ ದೇಶಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.