ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ತನ್ನ ಕಾರನ್ನು ಅಡ್ಡಗಟ್ಟಿದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ನೋಡಿದ ಮಹಿಳೆಯೊಬ್ಬಳು, ಅವರಿಗೆ ದೊಡ್ಡ ಚೇಸ್ ಒಂದನ್ನು ಮಾಡಬೇಕಾದ ಪ್ರಮೇಯ ತಂದಿಟ್ಟ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಒಕ್ಲಾಹಾಮಾದ ಎನಿಡ್ನಲ್ಲಿ ತನ್ನ ಕಾರನ್ನು ಅಡ್ಡಗಟ್ಟುತ್ತಲೇ, ಇಂದು ನನ್ನ ಹುಟ್ಟುಹಬ್ಬವಿದ್ದು, ಇದರ ಜೊತೆಗೆ ನನಗೆ ಈಗ ಮಲವಿಸರ್ಜನಗೆ ಅರ್ಜೆಂಟಾಗಿದೆ ಎಂದಿದ್ದಾಳೆ ಎಮಿಲಿ ಜೀನ್ ಓವಿಂಗ್ಸ್. ಏನು ಮಾಡಬೇಕೆಂದು ಪೊಲೀಸರು ಯೋಚಿಸುತ್ತಿರುವಂತೆಯೇ, ಕಾರನ್ನು ವೇಗವಾಗಿ ಓಡಿಸಲು ಆರಂಭಿಸಿ, 112ಕಿಮೀ/ಗಂಟೆ ವೇಗದಲ್ಲಿ ಚಲಾಯಿಸಿದ್ದಾಳೆ. ಕೊನೆಗೂ ಪೊಲೀಸರು ಆಕೆಯನ್ನು ಬಂಧಿಸಲು ಸಫಲರಾಗಿದ್ದಾರೆ.
ಎಮಿಲಿ ವಿರುದ್ಧ ಎರಡು ಕೌಂಟಿಗಳಲ್ಲಿ ಬಂಧನ ವಾರಂಟ್ಗಳು ಇದ್ದವೆಂದು ಬಳಿಕ ತಿಳಿದುಬಂದಿದೆ. ಸದ್ಯ ಆಕೆಯ ವಿರುದ್ಧ ಬೇಜವಾಬ್ದಾರಿ ಚಾಲನೆ, ಸೀಟ್ ಬೆಲ್ಟ್ ಇಲ್ಲದೇ ಕಾರು ಚಾಲನೆ ಹಾಗೂ ಮಾದಕ ದ್ರವ್ಯ ಹೊಂದಿದ್ದ ಆಪಾದನೆ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.