ಹೈದ್ರಾಬಾದ್ ನಗರದ ಬಾಲಕಿ ರಚಿಸಿದ ಚಿತ್ರಪಟ ಲಂಡನ್ ರೆಸ್ಟೋರೆಂಟ್ನಲ್ಲಿ ರಾರಾಜಿಸಲಿದೆ. ಹೈದ್ರಾಬಾದ್ ನ ಸೇಂಡಾ ಆಶ್ನಾ ಎಂಬ 14 ವರ್ಷದ ಬಾಲಕಿಯ ಚಿತ್ರಗಳನ್ನು ನೋಡಿ ಖುಷಿಯಾದ ಬ್ರಿಟಿಷ್ ಉದ್ಯಮಿ, ದಕ್ಷಿಣ ಲಂಡನ್ನಲ್ಲಿ ಅವರು ಪ್ರಾರಂಭಿಸಲಿರುವ ರೆಸ್ಟೋರೆಂಟ್ಗಾಗಿ ಆಕೆ ಬಿಡಿಸಿದ 6 ಚಿತ್ರಗಳನ್ನು ಖರೀದಿಸಿದ್ದಾರೆ.
ಆಶ್ನಾ ಬಿಡಿಸಿದ ಚಿತ್ರದ ಫೋಟೋಗಳನ್ನು ಬ್ರಿಟಿಷ್ ಉದ್ಯಮಿ ಫೇಸ್ಬುಕ್ನಲ್ಲಿ ನೋಡಿದ್ದರು. ದಕ್ಷಿಣ ಲಂಡನ್ನಲ್ಲಿ ಹೈದ್ರಾಬಾದಿ ಅಡುಗೆಯನ್ನು ಬಡಿಸಲಿರುವ ಅದೀನಾಸ್ ಕಿಚನ್ ಎಂಬ ರೆಸ್ಟೋರೆಂಟ್ನಲ್ಲಿ ಇಡಲು 6 ಅಡಿ ಎತ್ತರದ ಚಿತ್ರ ಆಯ್ಕೆ ಮಾಡಿದ್ದಾರೆ. ಆಶ್ನಾ ಚಿಕ್ಕಂದಿನಿಂದ ಚಿತ್ರ ಬಿಡಿಸುವ ಹವ್ಯಾಸ ಹೊಂದಿದ್ದು, ಇದುವರೆಗೆ 25 ಪೇಂಟಿಂಗ್ಗಳನ್ನು ರಚಿಸಿದ್ದಾರೆ. ಭಾರತೀಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು ಇದಾಗಿದ್ದು, ಅಕ್ರಿಲಿಕ್ ಹಾಗೂ ಪೆನ್ಸಿಲ್ ಆರ್ಟ್ ಚಿತ್ರಗಳು ಸೇರಿವೆ.
ನನ್ನ ತಂದೆ ನನಗೆ ತುಂಬ ಸಹಕಾರ ನೀಡುತ್ತಾರೆ ಎಂದು ಆಶ್ನಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನನ್ನ ಮಗಳಿಗೆ ಚಿತ್ರ ಬಿಡಿಸುವಲ್ಲಿನ ಆಸಕ್ತಿ ಹಾಗೂ ಕೌಶಲ್ಯ ನೋಡಿ ತುಂಬಾ ಖುಷಿಯಾಗಿದೆ. ನಾನು ಆಕೆ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಎಲ್ಲ ಬೆಂಬಲ, ಸಹಕಾರ ನೀಡುತ್ತೇನೆ ಎಂದು ಆಶ್ನಾ ತಂದೆ ಉರೂಜ್ ತುರಬಿ ಅವರು ಹೇಳಿದ್ದಾರೆ.