ಮಾಹಿತಿ ಯುಗದ ಅತಿ ದೊಡ್ಡ ತಲೆನೋವೆಂದರೆ ತಪ್ಪು ಮಾಹಿತಿಯನ್ನು ವ್ಯಾಪಕವಾಗಿ ಪಸರುವಂತೆ ಮಾಡಿ ಇಡೀ ಸಮಾಜವನ್ನೇ ತಪ್ಪು ದಾರಿಗೆ ಎಳೆಯುವುದು. ಕೋವಿಡ್-19 ವಿರುದ್ಧ ಜನಜಾಗೃತಿ ಸೃಷ್ಟಿಸಲು ದೊಡ್ಡ ಸವಾಲಾಗಿ ನಿಂತಿರುವುದೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಸುಳ್ಳು ಸುದ್ದಿ.
ಇತ್ತೀಚೆಗೆ ಇದೇ ಸಾಮಾಜಿಕ ಜಾಲತಾಣದಲ್ಲಿ, ಒಣ ಗಂಟಲು ಇದ್ದಲ್ಲಿ ಅದು ಕೋವಿಡ್-19 ರೋಗಲಕ್ಷಣ ಎಂದು ಹಬ್ಬಿಸಲಾದ ವದಂತಿಯೊಂದು ವೈರಲ್ ಆಗಿದೆ.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಥಾಯ್ಲೆಂಡ್ನ ಸಾರ್ವಜನಿಕ ಆರೋಗ್ಯ ಸಚಿವಾಲಯ, ತಾನು ಹೀಗೊಂದು ಸಲಹೆಯನ್ನು ಕೊಟ್ಟೇ ಇಲ್ಲ ಎಂದಿದೆ. ಒಣ ಗಂಟಲು ಕೋವಿಡ್-19ನ ರೋಗಲಕ್ಷಣವಲ್ಲ ಎಂದು ಖುದ್ದು ವೈದ್ಯಕೀಯ ತಜ್ಞರೂ ಸಹ ಹೇಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಇದೇ ವಿಚಾರವಾಗಿ ಎಚ್ಚರಿಕೆ ನೀಡಿದ್ದು, ಹೀಗೆಲ್ಲಾ ವದಂತಿಗಳನ್ನು ಹಬ್ಬಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿರಲಿದೆ ಎಂದಿದೆ.