ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗಾಗಿ ಸರ್ಕಾರ ವ್ಯವಸ್ಥೆ ಮಾಡಿದ ಶ್ರಮಿಕ್ ರೈಲಿನಲ್ಲಿ ಸಂಚರಿಸುವಾಗ 97 ಜನರು ಮೃತಪಟ್ಟಿದ್ದಾರೆ.
ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಒಬ್ರೇನ್ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಈ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಸಿ ಆರ್ ಪಿ ಸಿ ಸೆಕ್ಷನ್ 174 ರ ಅನ್ವಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಲಾಗಿದೆ.
ಒಟ್ಟಾರೆ 97 ಅಸಹಜ ಸಾವು ಪ್ರಕರಣಗಳ ಪೈಕಿ 87 ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ನಡೆದಿದ್ದು, 51 ಶವಪರೀಕ್ಷೆಯ ವರದಿ ಬಂದಿದೆ. ಬಹುತೇಕ ಪ್ರಕರಣಗಳಲ್ಲಿ ಹೃದಯಾಘಾತ, ಹೃದಯಸ್ತಂಭನ, ಮೆದುಳಿನ ರಕ್ತಸ್ರಾವ (ಬ್ರೈನ್ ಹ್ಯಾಮರೇಜ್), ಶ್ವಾಸಕೋಶ (ಉಸಿರಾಟ)ದ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಂದ ಸಾವು ಸಂಭವಿಸಿದೆ.
ಕಳೆದ ಮೇ 1 ರಿಂದ ಆಗಸ್ಟ್ 31 ರ ವರೆಗೆ ಒಟ್ಟು 4,621 ಶ್ರಮಿಕ್ ರೈಲುಗಳಲ್ಲಿ 63,19,000 ವಲಸೆ ಕಾರ್ಮಿಕರು ತಂತಮ್ಮ ತವರಿಗೆ ತಲುಪಿಸಲಾಗಿದೆ. ನಾನಾ ಕಾರಣದಿಂದ ಸಾವಿಗೀಡಾದವರ ಕುರಿತೂ ಪೊಲೀಸರು ಕಾನೂನು ಕ್ರಮ ವಹಿಸಿದ್ದಾರೆ.