ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃ ತರ್ಪಣಾದಿ ಶ್ರಾದ್ಧಗಳನ್ನು ಅನೇಕರು ನೆರವೇರಿಸಿದರು. ಆದರೆ, ಕೆಲವರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನೇ ಮರೆತಂತಿತ್ತು.
ಅದರಲ್ಲೂ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವಿವಿಧ ಘಾಟ್ ಗಳಲ್ಲಿ ತರ್ಪಣ ಕೊಡುವಾಗ ಅಂತರ ಕಾಯ್ದುಕೊಂಡಿರಲಿಲ್ಲ. ನೂರಾರು ಸಂಖ್ಯೆಯಲ್ಲಿ ಸೇರಿದ ಜನರು, ಮಾಸ್ಕ್ ಕೂಡ ಧರಿಸಿರಲಿಲ್ಲ.
ತಿಲತರ್ಪಣದ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕೆಂಬ ವಿಚಾರಗಳಿಗೆ ತರ್ಪಣ ಬಿಟ್ಟಂತಿತ್ತು. ಸರ್ಕಾರದ ನೀತಿಗಳೆಲ್ಲಿ ನದಿನೀರಿನಲ್ಲಿ ಕೊಚ್ಚಿ ಹೋಯಿತು.
ಕೊನೆಗೆ ನದಿಯತ್ತ ಹರಿದುಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಪೊಲೀಸರೊಂದಿಗೆ ಕೈಜೋಡಿಸಿದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು, ಮಾಸ್ಕ್ ವಿತರಿಸಿದರು. ಅಂತರ ಕಾಯ್ದುಕೊಂಡು ಧಾರ್ಮಿಕ ವಿಧಿ ವಿಧಾನ ನೆರವೇರಿಸುವಂತೆ ಅರಿವು ಮೂಡಿಸಿದರು.