ಕಳೆದ ಎರಡು ವರ್ಷಗಳ ಹಿಂದೆ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದು ಹೆಸರು ಪಡೆದಿದ್ದ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳು ದೈವಾಧೀನರಾದರು.
ಅಂದಿನಿಂದಲೂ ಕಿರಿಯ ಶ್ರೀ ಸಿದ್ದಲಿಂಗ ಶ್ರೀಗಳು ಮಠಾಧ್ಯಕ್ಷರಾಗಿ ಮಠವನ್ನು ಮುನ್ನಡೆಸುತ್ತಿದ್ದಾರೆ. ಶಿವಕುಮಾರ ಶ್ರೀಗಳು ಮಾಡುತ್ತಿದ್ದ ಯಂತ್ರಧಾರಣೆ ಮಾಡುವುದು, ಕಾಯಿ ಮಂತ್ರಿಸಿ ಕೊಡುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ಹೌದು, ಸಿದ್ದಲಿಂಗ ಶ್ರೀಗಳು ಹಿರಿಯ ಶ್ರೀಗಳ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶಿವಕುಮಾರ ಸ್ವಾಮೀಜಿಗಳು ಕೂರುತ್ತಿದ್ದ ಯಂತ್ರಧಾರಣೆ ಮಂಚದ ಮೇಲೆ ಇದೀಗ ಸಿದ್ದಲಿಂಗ ಶ್ರೀಗಳು ಆಸೀನರಾಗಿದ್ದಾರೆ. ಅಷ್ಟೆ ಅಲ್ಲ ನೊಂದು ಬಂದ ಭಕ್ತಾಧಿಗಳಿಗೆ ಯಂತ್ರಧಾರಣೆ, ಕಾಯಿ ಮಂತ್ರಿಸಿ ಕೊಡುವ ಮೂಲಕ ಅವರ ಕಷ್ಟ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ.
ಮೊದಲಿನಿಂದಲೂ ಮಠಕ್ಕೆ ಬರುವ ಭಕ್ತಾಧಿಗಳು ಅಮಾವಾಸ್ಯೆ, ಹುಣ್ಣಿಮೆಯಂದು ಶ್ರೀಗಳ ಬಳಿ ಯಂತ್ರ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದರು. ಇದೀಗ ಆ ಕಾರ್ಯ ಸಿದ್ದಲಿಂಗ ಶ್ರೀಗಳಿಂದ ಮುಂದುವರೆದಿದೆ. ಮಹಾಲಯ ಅಮಾವಾಸ್ಯೆಯಾದ ನಿನ್ನೆ ಅನೇಕ ಭಕ್ತರು ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಮಂತ್ರಿಸಿದ ಕಾಯಿ, ಯಂತ್ರ ಪಡೆದಿದ್ದಾರೆ.