ವಿಶ್ವದಲ್ಲಿ ಮೊದಲ ಬಾರಿ ಕೊರೊನಾ ಲಸಿಕೆ ಕಂಡು ಹಿಡಿದ ಹೆಗ್ಗಳಿಕೆ ರಷ್ಯಾದ್ದು. ಕೊರೊನಾ ಲಸಿಕೆ ಸ್ಪುಟ್ನಿಕ್ – ವಿ ಲಸಿಕೆ ಕಂಡು ಹಿಡಿದಿರುವ ರಷ್ಯಾ ಕ್ಲಿನಿಕಲ್ ಪ್ರಯೋಗ ಮುಂದುವರೆಸಿದೆ. ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಆದ್ರೆ ಈ ಪರೀಕ್ಷೆಯಲ್ಲಿ ಪಾಲ್ಗೊಂಡ ಏಳರಲ್ಲಿ ಒಬ್ಬರಿಗೆ ಲಸಿಕೆ ಅಡ್ಡ ಪರಿಣಾಮ ಬೀರ್ತಿದೆ. ಆದ್ರೆ ರಷ್ಯಾ ಇದು ಸೌಮ್ಯ ಲಕ್ಷಣ ಎಂದಿದೆ.
ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಲಸಿಕೆ ಹಾಕಿಸಿಕೊಂಡ ಶೇಕಡಾ 14 ರಷ್ಟು ಜನರ ಮೇಲೆ ಅಡ್ಡಪರಿಣಾಮ ಕಂಡು ಬಂದಿದೆ ಎಂದಿದ್ದಾರೆ. ಈ ಅಡ್ಡಪರಿಣಾಮಗಳು ಸೌಮ್ಯವಾಗಿದ್ದು, ಸ್ನಾಯು ನೋವು ಮತ್ತು ದೇಹದ ಉಷ್ಣತೆಯ ಹೆಚ್ಚಳ ಇತ್ಯಾದಿಗಳನ್ನು ಒಳಗೊಂಡಿವೆ ಎಂದಿದ್ದಾರೆ. ಇದು ಕೇವಲ 24 ಗಂಟೆಯಲ್ಲಿ ಕಡಿಮೆಯಾಗಿದೆ ಎಂದಿದ್ದಾರೆ.
ರಷ್ಯಾ, 100 ಮಿಲಿಯನ್ ಲಸಿಕೆ ತಯಾರಿಸಲು ಭಾರತೀಯ ಔಷಧೀಯ ಕಂಪನಿ ಡಾಕ್ಟರ್ ರೆಡ್ಡಿ ಲ್ಯಾಬ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಲಸಿಕೆ ಪ್ರಯೋಗದ ಮೊದಲ ಮತ್ತು ಎರಡನೇ ಹಂತ ಪೂರ್ಣಗೊಳ್ಳುತ್ತಿದ್ದಂತೆ ರಷ್ಯಾ ಲಸಿಕೆ ಸಿದ್ಧ ಎಂಬ ಘೋಷಣೆ ಮಾಡಿತ್ತು. ಲಸಿಕೆಯ ಮೂರನೇ ಹಂತದ ಪ್ರಯೋಗವು ಅದರ ಬಳಕೆಯೊಂದಿಗೆ ಏಕಕಾಲದಲ್ಲಿ ಮುಂದುವರಿಯಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದರು. ರಷ್ಯಾ ವಿವಿಧ ದೇಶಗಳಲ್ಲಿ 40,000 ಜನರ ಮೇಲೆ ಮೂರನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ.