ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳೊಂದಿಗೆ ಬಗೆದಷ್ಟು ಮಾಹಿತಿಗಳನ್ನು ಹೊರ ಹಾಕುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ವಿರೇನ್ ಖನ್ನಾ ತಾನು ಹೇಗೆಲ್ಲ ವ್ಯವಹಾರ ನಡೆಸಿ, ಡೀಲ್ ಕುದುರಿಸುತ್ತಿದ್ದೆ ಎಂಬ ಬಗ್ಗೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆನ್ನಲಾಗಿದೆ.
ಲಾಸ್ ನಲ್ಲಿರುವ ಪಬ್, ಫೈವ್ ಸ್ಟಾರ್ ಹೋಟೆಲ್ ಗಳ ಡಿಸ್ಕೋ ಥೆಕ್ ಆಯ್ಕೆ ಮಾಡಿಕೊಂಡು ಲಾಭ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದ. ಬಂದ ಲಾಭದಲ್ಲಿ ತನಗೆ ಶೇ.25 ರಷ್ಟು ಹಣ ನೀಡಬೇಕು ಎಂದು ಡೀಲ್ ಮಾಡುತ್ತಿದ್ದ. ಇಂತಹ ಪಬ್ ಹಾಗೂ ಹೋಟೆಲ್ ಗಳಲ್ಲಿ ಇವೆಂಟ್ ಆಯೋಜನೆ ಮಾಡಿ ಭಾರೀ ಪ್ರಮಾಣದ ಪಾರ್ಟಿ ಏರ್ಪಡಿಸುತ್ತಿದ್ದ.
ಹೀಗೆ ಆಯೋಜಿಸಿದ ಇವೆಂಟ್ ಗಳಿಗೆ ದೇಶ, ವಿದೇಶಗಳ ಕೆಲ ಮಾಡೆಲ್ ಗಳನ್ನು, ಸ್ಟಾರ್ ನಟ-ನಟಿಯರನ್ನು ಆಹ್ವಾನಿಸುತ್ತಿದ್ದ. ಇಲ್ಲಿ ಸುಂದರಿಯರ ಫೋಟೋಗಳನ್ನು ತೆಗೆದು ಪ್ರತಿಷ್ಠಿತ ಪತ್ರಿಕೆಗಳ ಪೇಜ್-3ಗಳಲ್ಲಿ ಪ್ರಕಟಿಸುತ್ತಿದ್ದ. ಸುಂದರಿಯರ ಪ್ರತ್ಯೇಕ ಫೋಟೋಗಳನ್ನು ಕೆಲವರಿಗೆ ಕಳುಹಿಸಿ ರೇಟ್ ಫಿಕ್ಸ್ ಮಾಡುತ್ತಿದ್ದ. ಹೀಗೆ ವಿರೇನ್ ಖನ್ನಾ ಹಣವನ್ನು ಪಡೆಯುತ್ತಿದ್ದ ಎನ್ನಲಾಗಿದೆ.