ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಯಾಗುತ್ತಿದ್ದಂತೆಯೇ ಸಚಿವಾಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದು, ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ನಡೆಸಿದ್ದಾರೆ.
ಈ ನಡುವೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನಾನೂ ಕೂಡ ಸಚಿವಾಕಾಂಕ್ಷಿ. ಆದರೆ ಲಾಬಿ ನಡೆಸಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ನನಗೂ ಮಂತ್ರಿಯಾಗಬೇಕು ಎಂಬ ಆಸೆಯಿದೆ. ಹಾಗಂತ ಲಾಬಿ ನಡೆಸಲು ನಾನು ದೆಹಲಿಗೆ ಬಂದಿಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕು ಯಾರಿಗೆ ನೀಡಬಾರದು ಎಂಬುದು ಸಿಎಂ ಯಡಿಯೂರಪ್ಪನವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.
ನಾನು ನನ್ನ ಕ್ಷೇತ್ರದ ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದೆಯಷ್ಟೇ. ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರೇ ಪೂರ್ಣಾವಧಿಯನ್ನು ಮುಗಿಸಲಿದ್ದಾರೆ. ಅವರು ಪ್ರಶ್ನಾತೀತ ನಾಯಕ ಎಂದು ಹೇಳಿದರು.