ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಆದಿತ್ಯ ಅಗರ್ವಾಲ್ ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟಿದ್ದಾನೆ. ಈತ ನಟಿ ರಾಗಿಣಿ ಹಾಗೂ ಸಂಜನಾ ಜತೆಯೂ ನಂಟು ಹೊಂದಿದ್ದನಲ್ಲದೇ ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ.
ಆದಿತ್ಯ ಅಗರ್ವಾಲ್ ಡ್ರಗ್ಸ್ ಪೆಡ್ಲರ್ ಗಳ ಜತೆ ನೇರ ಸಂಪರ್ಕ ಹೊಂದಿದ್ದ. ಅಲ್ಲದೇ ಈತ ವಿರೇನ್ ಖನ್ನಾ ಜತೆ ಡ್ರಗ್ಸ್ ವ್ಯವಹಾರದಲ್ಲಿ ಪಾರ್ಟನರ್ ಆಗಿದ್ದು, ಬೇನಾಮಿಯಾಗಿ ವ್ಯವಹರಿಸುತ್ತಿದ್ದ. ವಿರೇನ್ ಖನ್ನಾ ಜತೆ ಹಲವು ಪಾರ್ಟಿಗಳಲೂ ಈತ ಭಾಗಿಯಾಗಿದ್ದ.
ಬೆಂಗಳೂರಿನ ರಿಚ್ ಮಂಡ್ ರಸ್ತೆಯಲ್ಲಿರುವ ಐಷಾರಾಮಿ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ಆದಿತ್ಯ, ತಿಂಗಳಿಗೆ 40 ಸಾವಿರ ರೂ ಬಾಡಿಗೆ ನೀಡುತ್ತಿದ್ದ. ಡ್ರಗ್ಸ್ ದಂಧೆ ಮೂಲಕವೇ ಐಷಾರಾಮಿ ಜೀವನ ಸಾಗಿಸುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಮೂಲತ: ಈತ ಹರ್ಯಾಣದ ಪಂಚಕುಲದ ನಿವಾಸಿಯಾಗಿದ್ದು, ಡ್ರಗ್ಸ್ ಮಾಫಿಯಾ ಕೇಸ್ ದಾಖಲಾಗುತ್ತಿದ್ದಂತೆಯೇ ಬೆಂಗಳೂರಿನಿಂದ ಹರ್ಯಾಣಾಗೆ ಪರಾರಿಯಾಗಿದ್ದ.