ಕಾರವಾರ: ಸಮುದ್ರಕ್ಕೆ ಈಜಲೆಂದು ಹೋದವರು ಅಲೆಗಳ ಹೊಡೆತಕ್ಕೆ ಸಿಲುಕಿ ನೋಡನೋಡುತ್ತಿದ್ದಂತೆಯೇ ನೀರು ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ.
ಇಲ್ಲಿನ ಕರಿಯಪ್ಪನ ಕಟ್ಟೆ ಕಡಲ ತೀರದಲ್ಲಿ ಈ ಘಟನೆ ನಡೆದಿದ್ದು, ನೀರುಪಾಲಾದವರನ್ನು ಮೈಸೂರಿನ 15 ವರ್ಷದ ಸುಹಾನ್ ಹಾಗೂ ಮಂಡ್ಯದ 15 ವರ್ಷದ ಉಲ್ಲಾಸ್ ಎಂದು ಗುರುತಿಸಲಾಗಿದೆ.
8 ಜನರ ಗುಂಪು ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದು, ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುಂಜಾನೆಯೇ ಎದ್ದು ಬಾಲಕರಿಬ್ಬರೂ ಸಮುದ್ರಕ್ಕೆ ಈಜಲು ಹೋಗಿದ್ದಾರೆ. ಈ ವೇಳೆ ಸಮುದ್ರದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ.
ಅಲೆಗಳ ಸೆಳೆತಕ್ಕೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಸುಹಾನ್ ನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಬಾಲಕ ಉಲ್ಲಾಸ್ ಸಮುದ್ರದ ಸೆಳೆತಕ್ಕೆ ಕೊಚ್ಚಿಹೋಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.