ಗಾಜಿಯಾಬಾದ್: ವ್ಯಕ್ತಿಯೊಬ್ಬ ವೃದ್ಧೆಯನ್ನು ನಡುರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಾಜಿಯಾಬಾದ್ ಜಿಲ್ಲೆಯ ರಾಜಪುರ ಎಂಬ ಗ್ರಾಮದಲ್ಲಿ ಸೆಪ್ಟೆಂಬರ್ 12 ರಂದು ಈ ಘಟನೆ ನಡೆದಿದೆ. ಮಾರಾಮಾರಿಯ ಸಿಸಿ ಟಿವಿ ಫೂಟೇಜ್ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಪರಿಚಿತ ವ್ಯಕ್ತಿ ಮಹಿಳೆಯನ್ನು ರಸ್ತೆಯಲ್ಲಿ ಹಾಕಿ ಮೆಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾನೆ. ಅಲ್ಲದೆ, ಪಕ್ಕದಲ್ಲಿದ್ದ ಖುರ್ಚಿಯನ್ನು ತೆಗೆದು ಆಕೆಗೆ ಹೊಡೆಯುತ್ತಾನೆ. ತೀವ್ರವಾಗಿ ಅಸ್ವಸ್ಥಳಾಗಿ ರಸ್ತೆಯಲ್ಲಿ ಬಿದ್ದ ಆಕೆಯನ್ನು ಸ್ಥಳೀಯರು ತಂದು ರಸ್ತೆಯ ಮೇಲೆ ಕೂರಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಟ್ವಿಟರ್ ನಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಾಜಿಯಾಬಾದ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆದರೆ, ಮಹಿಳೆ ಹಲ್ಲೆಯ ದೂರು ನೀಡಲು ಹಿಂದೇಟು ಹಾಕಿದ್ದು, ಅಂಥ ಘಟನೆ ನಡೆದೇ ಇಲ್ಲ ಎಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಹಲ್ಲೆ ನಡೆಸುವಾಗ ಸಾರ್ವಜನಿಕರು ತಪ್ಪಿಸಲು ಹೋಗದೇ ನೋಡುತ್ತ ನಿಂತ ಬಗ್ಗೆ ನೆಟ್ಟಿಗರು ಆಕ್ಷೇಪಿಸಿದ್ದಾರೆ.