ಮೆಸೆಚುಸೆಟ್ಸ್ನ 88 ವರ್ಷದ ವ್ಯಕ್ತಿಯೊಬ್ಬರು ತಮ್ಮ 24,901 ಮೈಲಿ (40,075 ಕಿ.ಮೀ.) ನಡಿಗೆಯನ್ನು ಇನ್ನೇನು ಪೂರೈಸಲಿದ್ದಾರೆ. ಈ ಮೂಲಕ ಅವರು ಭೂಮಿಯ ಸುತ್ತಳತೆಯಷ್ಟು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದಂತಾಗಲಿದೆ.
ಬ್ರಾಡ್ ಹಾತ್ವೇ ಹೆಸರಿನ ಈ ವ್ಯಕ್ತಿ ತಮ್ಮ ಕೊನೆಯ ಮೈಲಿಯ ನಡಿಗೆಯನ್ನು ಅಕ್ಟೋಬರ್ 3ರಂದು ಪೂರ್ಣಗೊಳಿಸಲಿದ್ದಾರೆ. ತಮ್ಮ 50ರ ವಯಸ್ಸಿನಲ್ಲಿ ಡಯಾಬಿಟಿಸ್ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾದ ಬ್ರಾಡ್ಗೆ ನಡೆದಾಡುವ ಅಭ್ಯಾಸ ಬೆಳೆಸಿಕೊಳ್ಳಲು ವೈದ್ಯರು ಸಲಹೆ ನೀಡಿದರು. ಇದಾದ ಮಾರನೇ ದಿನದಿಂದಲೆ ಪ್ರತಿನಿತ್ಯ ಮೂರು ಮೈಲಿ ನಡಿಗೆ ಆರಂಭಿಸಿದ ಬ್ರಾಡ್, ತಮ್ಮ ಪಟ್ಟಣದ ಅಷ್ಟೂ ಅಗಲಕ್ಕೆ ನಕಾಶೆ ಮಾಡಿಕೊಂಡಿದ್ದಾರೆ.
ಡಿಸೆಂಬರ್ 1988ರಿಂದ ತಮ್ಮ ನಡಿಗೆಯನ್ನು ಆರಂಭಿಸಿದ ಬ್ರಾಡ್, ಬಿಸಿಲು-ಮಳೆ ಎನ್ನದೇ ಪ್ರತಿನಿತ್ಯವೂ ಕಿಮೀಗಟ್ಟಲೇ ನಡೆಯುತ್ತಿದ್ದರು. ಕೆಲವೊಂದು ದಿನ ಅವರು 16 ಕಿಮೀಗಳಷ್ಟು ನಡೆಯುತ್ತಿದ್ದರು. ತಮ್ಮ ಈ ನಡಿಗೆಯ ದಿನಗಳಲ್ಲಿ ಬಳಷ್ಟು ತ್ಯಾಜ್ಯ ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸುವ ಅಭ್ಯಾಸ ಮಾಡಿಕೊಂಡಿದ್ದು, ಅವುಗಳಿಂದಲೇ $7000ಗಳಷ್ಟನ್ನು ಸಂಪಾದನೆ ಮಾಡಿದ್ದಾಗಿ ಬ್ರಾಡ್ ತಿಳಿಸಿದ್ದಾರೆ.
ಕ್ಯಾಲೆಂಡರ್ ಮೇಲಿರುವ ಪ್ರತಿದಿನದ ಮೇಲೂ ತಾನು ಕ್ರಮಿಸಿದ ದೂರವನ್ನು ಬರೆದುಕೊಂಡು ಬಂದ ಬ್ರಾಡ್, ಇತ್ತೀಚೆಗೆ ಒಟ್ಟಾರೆಯಾಗಿ ತಾವೆಷ್ಟು ದೂರ ಕ್ರಮಿಸಿದ್ದೇನೆ ಎಂದು ಲೆಕ್ಕಾಚಾರ ಮಾಡಿದ್ದಾರೆ.